ಮೂತ್ರನಾಳ ವೈಫಲ್ಯಕ್ಕಾಗಿ ಸೇನಾ ಆಸ್ಪತ್ರೆಯಲ್ಲಿ ಮಸೂದ್ ಅಝರ್‌ಗೆ ಚಿಕಿತ್ಸೆ?

Update: 2019-03-02 14:25 GMT

ಇಸ್ಲಾಮಾಬಾದ್, ಮಾ. 2: ಪುಲ್ವಾಮ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ಮೂತ್ರನಾಳ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಶಂಕಿಸಲಾಗಿದೆ.

ಅವನು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯೊಂದರಲ್ಲಿ ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾನೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಜೈಶೆ ಮುಹಮ್ಮದ್ ಮುಖ್ಯಸ್ಥ ‘ಕಾಯಿಲೆಪೀಡಿತನಾಗಿದ್ದಾನೆ’ ಎಂಬುದಾಗಿ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಹೇಳಿಕೆ ನೀಡಿದ ಬಳಿಕ, ಭದ್ರತಾ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.

‘‘ಮಸೂದ್ ಅಝರ್ ಈಗ ಮೂತ್ರನಾಳ ವೈಫಲ್ಯದಿಂದ ಬಳಲುತ್ತಿದ್ದಾನೆ ಹಾಗೂ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂಬುದಾಗಿ ಇತ್ತೀಚಿನ ವರದಿಗಳು ಹೇಳಿವೆ. ಪಾಕಿಸ್ತಾನಿ ಸೇನೆಯ ಪ್ರಧಾನ ಕೇಂದ್ರ ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಅವನು ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾನೆ’’ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದರು.

ಅಮೆರಿಕದ ಸಿಎನ್‌ಎನ್ ನ್ಯೂಸ್‌ಗೆ ಗುರುವಾರ ನೀಡಿದ ಸಂದರ್ಶನವೊಂದರಲ್ಲಿ ಕುರೇಶಿ ಹೀಗೆ ಹೇಳಿದ್ದರು: ‘‘ನನಗೆ ಸಿಕ್ಕ ಮಾಹಿತಿಯ ಪ್ರಕಾರ, ಅವನು ಪಾಕಿಸ್ತಾನದಲ್ಲಿದ್ದಾನೆ. ಅವನು ಕಾಯಿಲೆಪೀಡಿತನಾಗಿದ್ದಾನೆ, ಎಷ್ಟೆಂದರೆ ಅವನಿಗೆ ಮನೆಯಿಂದ ಹೊರಗೆ ಹೋಗಲಿಕ್ಕೂ ಆಗುವುದಿಲ್ಲ’’.

ಅಲ್-ಖಾಯಿದ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಒಸಾಮ ಬಿನ್ ಲಾದನ್‌ನ ಆಪ್ತನಾಗಿದ್ದ ಜೈಶೆ ಮುಹಮ್ಮದ್ ಮುಖ್ಯಸ್ಥ, ಹಲವಾರು ಆಫ್ರಿಕದ ದೇಶಗಳಲ್ಲಿ ಭಯೋತ್ಪಾದನೆಗೆ ಪ್ರೇರಣೆ ನೀಡಿದವನಾಗಿದ್ದಾನೆ ಎಂದು ಅಧಿಕಾರಿಗಳು ಹೇಳುತ್ತಾರೆ.

50 ವರ್ಷದ ಭಯೋತ್ಪಾದನೆ ರೂವಾರಿ ಮಸೂದ್ ಅಝರ್‌ನ ಪ್ರಭಾವ ಎಷ್ಟಿದೆಯೆಂದರೆ, 1999 ಡಿಸೆಂಬರ್ 31ರಂದು ಅಪಹೃತ ಇಂಡಿಯನ್ ಏರ್‌ಲೈನ್ಸ್ ವಿಮಾನದ ಬಿಡುಗಡೆಗೆ ಪ್ರತಿಯಾಗಿ ಅವನನ್ನು ಬಿಡುಗಡೆ ಮಾಡಿದಾಗ, ಅಂದೇ ರಾತ್ರಿ ಅವನಿಗಾಗಿ ಒಸಾಮ ಬಿನ್ ಲಾದನ್ ಔತಣಕೂಟ ಏರ್ಪಡಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News