ಸಮುದಾಯ ಆರೋಗ್ಯ ಕೇಂದ್ರ ಉತ್ತಮ ಸೇವೆ ನೀಡಲಿ: ಜಯಮಾಲಾ
ಬ್ರಹ್ಮಾವರ, ಮಾ.2: ನೂತನವಾಗಿ ಆರಂಭಗೊಂಡಿರುವ ಸಮುದಾಯ ಆರೋಗ್ಯ ಕೇಂದ್ರ ಮುಂದಿನ ದಿನಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹಾರೈಸಿದ್ದಾರೆ.
ಶನಿವಾರ ಬ್ರಹ್ಮಾವರದಲ್ಲಿ ಜಿಪಂ, ಜಿಲ್ಲಾಡಳಿತ ಉಡುಪಿ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ರಹ್ಮಾವರ ಪರಿಸರದಲ್ಲಿ ಯಾವುದೇ ತುರ್ತು ಸಂದಭರ್ದಲ್ಲಿ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಈ ಸಮುದಾಯ ಆರೋಗ್ಯ ಕೇಂದ್ರ ಪ್ರತಿಯೊಂದು ವಿಭಾಗಕ್ಕೂ ವೈದ್ಯರು ಹಾಗೂ ಸಿಬ್ಬಂದಿಗಳ ಪೂರೈಕೆ ಹಾಗೂ ಸಿಬ್ಬಂದಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಆಸ್ಪತ್ರೆ ಯಲ್ಲಿ ಎಲ್ಲಾ ತುರ್ತು ಚಿಕಿತ್ಸೆಗಳಿಗೆ ಅನುಕೂಲವಾಗುವಂತ ತಂತ್ರಜ್ಞಾನವನ್ನು ಬಳಸಿ ಕೊಳ್ಳಬೇಕಾಗಿದೆ ಎಂದರು.
ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು. ಬೇರೆಡೆಗೆ ಪ್ರಭಾರವಾಗಿ ಹೋಗಿರುವ ಸ್ತ್ರೀರೋಗ ತಜ್ಞರನ್ನು ಮರಳಿ ಕರೆ ತರುವುದು ಅಥವಾ ಆ ಜಾಗಕ್ಕೆ ಬೇರೆಯವರನ್ನು 3 ತಿಂಗಳ ಮಟ್ಟಿಗೆ ನಿಯೋಜಿಸಲಾಗುವುದು ಎಂದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದ್ದು, ಡಯಾಲಿಸಿಸ್ ಯಂತ್ರದ ವ್ಯವಸ್ಥೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಓಂ ಪ್ರಕಾಶ್ ಕಟ್ಟಿಮನೆ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರ ನಾಯಕ್, ಉಡುಪಿ ತಾಪಂ ಸದಸ್ಯೆ ಕುಸುಮ ಪೂಜಾರಿ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ ವಿ ನಾಯ್ಕಾ, ಹಾರಾಡಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿಎ.ಶೆಟ್ಟಿ, ತಾಪಂ ಸದಸ್ಯೆ ವಸಂತಿ ಪೂಜಾರಿ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಸ್ವಾಗತಿಸಿದರು.