ವೈದ್ಯಕೀಯ ತಪಾಸಣೆ ಬಳಿಕ ವಾಯುಪಡೆ ಹಾಸ್ಟೆಲ್‌ಗೆ ಅಭಿನಂದನ್ ಸ್ಥಳಾಂತರ

Update: 2019-03-02 15:56 GMT

ಹೊಸದಿಲ್ಲಿ, ಮಾ.2: ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದು ಶುಕ್ರವಾರ ರಾತ್ರಿ ಭಾರತಕ್ಕೆ ಮರಳಿದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಸೇನಾ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಪಾಸಣೆಯ ಬಳಿಕ ವಾಯುಪಡೆಯ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್ ವಶದಲ್ಲಿದ್ದ ಅಭಿನಂದ್ ಭಾರತಕ್ಕೆ ಮರಳಿ ಬಂದ ಬಳಿಕ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆದಿದೆ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ ಅಭಿನಂದನ್ ಪ್ರದರ್ಶಿಸಿದ್ದ ಧೈರ್ಯ ಮತ್ತು ಘನತೆಯನ್ನು ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಇತರರು ಶ್ಲಾಘಿಸಿ ಅವರನ್ನು ಅಭಿನಂದಿಸಿದ್ದಾರೆ.

ಭಾರತದ ಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಮಿಗ್-21 ವಿಮಾನದಲ್ಲಿ ಬೆನ್ನಟ್ಟಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಲು ಯಶಸ್ವಿಯಾಗಿದ್ದರು. ಆದರೆ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ್ದ ಮಿಗ್-21 ವಿಮಾನ ಪಾಕಿಸ್ತಾನದ ವಾಯುಪಡೆಯ ಕ್ಷಿಪಣಿ ದಾಳಿಯಿಂದ ಪತನವಾದಾಗ ಅಭಿನಂದನ್ ವಿಮಾನದಿಂದ ಹೊರಜಿಗಿದು ಜೀವ ಉಳಿಸಿಕೊಂಡಿದ್ದರು. ಆದರೆ ಪಾಕಿಸ್ತಾನದ ಪ್ರಜೆಗಳ ಕೈಗೆ ಸಿಕ್ಕಿಬಿದ್ದಿದ್ದರು. ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಲ್ಲದೆ, ಪಾಕ್ ಸೇನೆಯು ಕಣ್ಣಿಗೆ ಬಟ್ಟೆಕಟ್ಟಿ ಕೈಕೋಳ ತೊಡಿಸಿ ವಿಚಾರಣೆ ನಡೆಸಿತ್ತು. ಆದರೆ ಅವರು ಪ್ರದರ್ಶಿಸಿದ ಶಾಂತಚಿತ್ತತೆ ಮತ್ತು ದಿಟ್ಟತನ ಎಲ್ಲರ ಮನಗೆದ್ದಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News