ಅದ್ಯಪಾಡಿಯಲ್ಲಿ ಕೆಂಪು ಕಲ್ಲಿನ ಅಕ್ರಮ ಗಣಿಗಾರಿಕೆ: ಯಂತ್ರ ಸಹಿತ 2,000 ಕೆಂಪು ಕಲ್ಲು ವಶಕ್ಕೆ
ಮಂಗಳೂರು, ಮಾ. 2: ತಾಲೂಕಿನ ಅದ್ಯಪಾಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದರೆನ್ನಲಾದ ಸ್ಥಳಕ್ಕೆ ಬಜ್ಪೆ ಪೊಲೀಸರು, ಉತ್ತರ ವಿಭಾಗದ ರೌಡಿ ನಿಗ್ರಹದಳ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮ್ಯಾಕ್ಸಿಂ ಪಿಂಟೋ ಎಂಬವರು ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದವರು ಎಂದು ಗುರುತಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಕೆಂಪುಕಲ್ಲಿನ ಕಟ್ಟಿಂಗ್ ಮೇಶಿನ್, ಕೆಂಪು ಕಲ್ಲನ್ನು ತೆಗೆಯಲು ಬಳಸುವ ಮೇಶಿನ್, 2000ಕ್ಕೂ ಅಧಿಕ ಕೆಂಪು ಕಲ್ಲುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿ.ಕೆ ಮೂರ್ತಿ, ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ, ಇನ್‌ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಪ್ರಕಾಶ್ ಮೂರ್ತಿ, ಶ್ರೀರಾಜೇಶ್, ಶಶಿಧರ್ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಎಎಸ್‌ಐ ಮುಹಮ್ಮದ್, ಸಿಬ್ಬಂದಿ ಭಾಗವಹಿಸಿದ್ದಾರೆ.