ಟೋಯಿಂಗ್ ಕಾರ್ಯಾಚರಣೆ: 14 ವಾಹನ ಎತ್ತಂಗಡಿ
ಮಂಗಳೂರು, ಮಾ.2: ನೋ ಪಾರ್ಕಿಂಗ್ ಪ್ರದೇಶ ಸಹಿತ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳ ವಿರುದ್ಧ ಮಂಗಳೂರು ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಶನಿವಾರ ಆರಂಭಗೊಂಡಿದೆ.
ಕಾರ್ಯಾಚರಣೆಯ ಮೊದಲ ದಿನ ನಿಯಮ ಉಲ್ಲಂಘಿಸಿ ಪಾರ್ಕ್ ಮಾಡಿದ್ದ 14 ವಾಹನಗಳನ್ನು ಟೋಯಿಂಗ್ ವಾಹನ ಎತ್ತಂಗಡಿ ಮಾಡಿ ಪೊಲೀಸ್ ಠಾಣೆಗೆ ತಂದು ಇಳಿಸಿದೆ. ಇದರೊಂದಿಗೆ ನಗರದಲ್ಲಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ನಡೆಸುವವರು ಎಚ್ಚೆತ್ತುಕೊಳ್ಳುವಂತಾಗಿದೆ.
ಟಿಂಟ್ ಗ್ಲಾಸ್; 143 ಪ್ರಕರಣ: ಇನ್ನೊಂದೆಡೆ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರವೇ ಕಾರ್ಯಾಚರಣೆಗೆ ಇಳಿದ ಸಂಚಾರ ಪೊಲೀಸರು 143 ವಾಹನಗಳ ವಿರುದ್ಧ ಟಿಂಟ್ ಗ್ಲಾಸ್ ಅಳವಡಿಸಿದ ಬಗ್ಗೆ ಕೇಸು ದಾಖಲಿಸಿದ್ದಾರೆ.
ನಗರದ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸ್ ತಂಡ, 143 ವಾಹನಗಳ ವಿರುದ್ಧ ಕೇಸು ದಾಖಲಿಸಿ, 14,300 ರೂ. ದಂಡ ವಸೂಲಿ ಮಾಡಿದೆ ಎಂದು ನಗರ ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ.