ಶಾಲೆಗೆ ಹೊರಟ ನನ್ನ ಮಗು ಹಿಂದಿರುಗಿ ಬರುವ ನಂಬಿಕೆಯಿಲ್ಲ: ಶಾ ಫೈಝಲ್

Update: 2019-03-02 17:15 GMT

ಹೊಸದಿಲ್ಲಿ, ಮಾ.2: “ಕಳೆದ ಹದಿನೈದು ದಿನಗಳು ನಮ್ಮೆಲ್ಲರ ಪಾಲಿಗೆ ಭಯಾನಕವಾಗಿತ್ತು. ನಾನು ನನ್ನ ಮನೆಯಲ್ಲಿದ್ದೆ. ಯುದ್ಧ ವಿಮಾನಗಳು ನಮ್ಮ ಮೇಲೆಯೇ ಪತನಗೊಳ್ಳಬಹುದು ಹಾಗೂ ಬಾಂಬುಗಳು ನಮ್ಮ ಛಾವಣಿಗಳನ್ನು ಸೀಳಿ ಬರಬಹುದೆಂದು ನಾವು ಆತಂಕದಿಂದ ಎದುರು ನೋಡುತ್ತಿದ್ದೆವು. ನಾವು ನಿದ್ದೆ ಮಾಡಿಲ್ಲ.''

ಹೀಗೆಂದು ಹೇಳಿದವರು ಕೆಲ ಸಮಯದ ಹಿಂದೆ ತಮ್ಮ ಆಡಳಿತಾತ್ಮಕ ಹುದ್ದೆ ತ್ಯಜಿಸಿದ ಕಾಶ್ಮೀರದ ಐಎಎಸ್ ಟಾಪರ್ ಶಾ ಫೈಝಲ್.

ರಾಜಧಾನಿಯಲ್ಲಿ ನಡೆಯುತ್ತಿರುವ ಇಂಡಿಯಾ ಟುಡೇ ಕಾಂಕ್ಲೇವ್ ನಲ್ಲಿ ಅವರು ಮಾತನಾಡುತ್ತಾ, ಪುಲ್ವಾಮ ದಾಳಿಯ ನಂತರ ಕಾಶ್ಮೀರದ ಜನರನ್ನು ಕಾಡುತ್ತಿರುವ ಯುದ್ಧದ ಭಯದ ಬಗ್ಗೆ ವಿವರಿಸಿದ್ದಾರೆ.

``ಇಡೀ ಕಾಶ್ಮೀರದ ಜನತೆ ಯುದ್ಧದ ಭಯದಿಂದ ಆಗತ್ಯ ಸಾಮಾನುಗಳನ್ನು ಖರೀದಿಸಿದ್ದರಲ್ಲದೆ ಪ್ರಾಯಶಃ ಒಂದೆರಡು ತಿಂಗಳು ಯುದ್ಧವಾಗಬಹುದೆಂದು ಅಂದುಕೊಂಡಿದ್ದರು. ಪರಮಾಣು ದಾಳಿಯಾದರೆ ಏನಾಗಬಹುದು ಎಂದು ಜನರು ಆತಂಕಗೊಂಡಿದ್ದರು'' ಎಂದರು.

“ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಕಾಡಿದಾಗಲೆಲ್ಲಾ ಅತ್ಯಂತ ಹೆಚ್ಚು ಬಾಧಿತರಾಗುವವರು ಜಮ್ಮು ಕಾಶ್ಮೀರದ ಜನರು. ಇದೇ ಕಾರಣಕ್ಕಾಗಿ ನಮಗೆ ಯುದ್ಧ ನಡೆಯುವುದು ಬೇಡ'' ಎಂದು ಫೈಝಲ್ ಹೇಳಿದರು.

“ಕಳೆದ  30 ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಯುದ್ಧ ಆಟವಾಡುತ್ತಿದೆ. ಪ್ರತಿ ದಿನ ಬೆಳಗ್ಗೆ ನನ್ನ ಮಗು ಶಾಲೆಗೆ ಹೋಗುವಾಗ ಆತ ಮರಳಿ ಮನೆಗೆ ಬರುತ್ತಾನೆಯೇ ಎಂಬುದು ತಿಳಿದಿಲ್ಲ ಎಂದು ನನ್ನ ಪತ್ನಿ ಹೇಳುತ್ತಾಳೆ. ನನ್ನ ತಾಯಿ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ನನ್ನ ತಂದೆಯ ಭಾವಚಿತ್ರವನ್ನು ನೋಡಿದಾಗಲೆಲ್ಲಾ ಪ್ರತಿ ಸಂಜೆ ನಮ್ಮ ಮನೆಯಲ್ಲಿ ಯುದ್ಧದ ನೆನಪಾಗುತ್ತದೆ, ಇದೇ ರೀತಿ ಜಮ್ಮು, ಕಾಶ್ಮೀರ ಮತ್ತು ಲಡಾಕ್ ನ ಎಲ್ಲಾ ಮನೆಗಳಲ್ಲಿಯೂ ಯುದ್ಧ ನೆನಪಾಗುತ್ತದೆ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News