ಬೈಂದೂರು: ಚಾಲಕನ ಮರೆವಿನಿಂದ 45 ಪ್ರಯಾಣಿಕರನ್ನು ಬಿಟ್ಟು ಹೋದ ರೈಲು !
ಬೈಂದೂರು, ಮಾ. 2: ಚಾಲಕನ ಮರೆವಿನಿಂದ ಬೈಂದೂರು ನಿಲ್ದಾಣದಲ್ಲಿ ನಿಲ್ಲದ ಅಜ್ಮೀರ್‌ನಿಂದ ಕೇರಳಕ್ಕೆ ಹೋಗುತ್ತಿದ್ದ ರೈಲು, 45 ಮಂದಿ ಪ್ರಯಾ ಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ಹೋದ ಘಟನೆ ಶನಿವಾರ ಸಂಜೆ ನಡೆದಿದೆ.
ಕೊಲ್ಲೂರು ದೇವಳಕ್ಕಾಗಿ ಆಗಮಿಸಿದ್ದ 45 ಮಂದಿ ಪ್ರಯಾಣಿಕರು ಅಜ್ಮೀರ್- ಎರ್ನಾಕುಲಂ ಮರುಸಾಗರ್ ರೈಲಿನಲ್ಲಿ ಮಾ. 2ರಂದು ಕೇರಳಕ್ಕೆ ತೆರಳಲು ಮುಂಗಡ ಸೀಟುಗಳನ್ನು ಕಾಯ್ದಿರಿಸಿದ್ದರು. ಇವರೆಲ್ಲ ಸಂಜೆ 4:40ರ ಸುಮಾರಿಗೆ ರೈಲಿಗಾಗಿ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದರು.
ಈ ವೇಳೆ ಆಗಮಿಸಿದ ರೈಲು ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ನೀಡದೆ ಮುಂದಕ್ಕೆ ಸಾಗಿತು. ಇದರಿಂದ ಪ್ರಯಾಣಿಕರು ಗಲಿಬಿಲಿಗೊಂಡರು. ತಕ್ಷಣ ಅವರೆಲ್ಲ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ, ತುರ್ತು ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಕೂಡಲೇ ಅಧಿಕಾರಿಗಳು ಉಡುಪಿ ನಿಲ್ದಾಣಕ್ಕೆ ಈ ಕುರಿತು ಮಾಹಿತಿ ರವಾನಿಸಿದರು.
ಇದೇ ಸಮಯದಲ್ಲಿ ಆಗಮಿಸಿದ ಕಾರವಾರ-ಬೆಂಗಳೂರು ರೈಲಿನಲ್ಲಿ ಈ 45 ಪ್ರಯಾಣಿಕರನ್ನು ಉಡುಪಿಗೆ ಕಳುಹಿಸಿಕೊಡಲಾಯಿತು. ಉಡುಪಿ ನಿಲ್ದಾಣಕ್ಕೆ ಆಗಮಿಸಿದ ಇವರೆಲ್ಲರು, ಅಲ್ಲೇ ನಿಂತಿದ್ದ ಮರುಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹತ್ತಿ ಮುಂದಕ್ಕೆ ಪ್ರಯಾಣ ಬೆಳೆಸಿದರೆಂದು ತಿಳಿದುಬಂದಿದೆ.
‘ಅಜ್ಮೀರ್ ನಿಂದ ಆಗಮಿಸಿದ ಮರುಸಾಗರ್ ಎಕ್ಸ್‌ಪ್ರೆಸ್ ರೈಲು ಬಹಳ ವೇಗವಾಗಿ ಚಲಿಸುತ್ತಿದ್ದುದರಿಂದ ಅದರ ಚಾಲಕ ಬೈಂದೂರು ನಿಲ್ದಾಣದಲ್ಲಿ ನಿಲ್ಲಿಸಲು ಮರೆತಿರಬೇಕು. ಮುಂದಕ್ಕೆ ಹೋದ ನಂತರ ಚಾಲಕನಿಗೆ ಈ ಬಗ್ಗೆ ಅರಿವಾಗಿದ್ದು, ರೈಲನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯ ವಾಗದಿದ್ದಾಗ ಮುಂದೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಪ್ರಯಾಣಿಕರಿಗಾಗಿ ಕಾಯಲಾಯಿತು. ಬಳಿಕ ಇಲ್ಲಿ ಬಿಟ್ಟು ಹೋದವರನ್ನು ಬೇರೆ ರೈಲಿನಲ್ಲಿ ಉಡುಪಿಗೆ ಕಳುಹಿಸಿಕೊಡಲಾಯಿತು. ಎಲ್ಲರು ಸುರಕ್ಷಿತವಾಗಿ ಮರು ಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೇರಳಕ್ಕೆ ಪ್ರಯಾಣಿಸಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ಬೈಂದೂರು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.