‘ಅಭಿನಂದನ್ ರನ್ನು ಪಾಕ್ ಬಿಡುಗಡೆಗೊಳಿಸಿದೆ, ನನ್ನ ಪುತ್ರನನ್ನು ಎಬಿವಿಪಿ ಯಾವಾಗ ಬಿಡುಗಡೆಗೊಳಿಸುತ್ತದೆ'

Update: 2019-03-04 10:05 GMT

ಹೊಸದಿಲ್ಲಿ, ಮಾ.4: “ಪಾಕಿಸ್ತಾನ ನಮ್ಮ  ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿದೆ. ನನ್ನ ಪುತ್ರ ನಜೀಬ್ ನನ್ನು ಎಬಿವಿಪಿ ಯಾವಾಗ ಬಿಡುಗಡೆಗೊಳಿಸುವುದು?'' ಹೀಗೆಂದು ಟ್ವೀಟ್ ಮಾಡಿದವರು  ಕಳೆದೆರಡು ವರ್ಷಗಳಿಂದ ನಾಪತ್ತೆಯಾಗಿರುವ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ ಫಾತಿಮಾ ನಫೀಸ್.

ತನ್ನ ಪುತ್ರನನ್ನು ಪತ್ತೆ ಹಚ್ಚುವ ಸಲುವಾಗಿ ಹಗಲಿರುಳು ಹೋರಾಟ ನಡೆಸಿದ ಹೊರತಾಗಿಯೂ ಫಲ ಕಾಣದೆ ತೀವ್ರ ನೊಂದಿರುವ ಫಾತಿಮಾ ಮೇಲಿನಂತೆ ಟ್ವೀಟ್ ಮಾಡಿದ್ದಾರೆ.

“ನನ್ನ ಪುತ್ರನನ್ನು ಪತ್ತೆ ಹಚ್ಚಲು ಸಿಬಿಐ, ವಿಶೇಷ ತನಿಖಾ ತಂಡಕ್ಕೆ  ಹಾಗೂ ಸರಕಾರಕ್ಕೆ ಇರುವ ಅಡ್ಡಿಯಾದರೂ ಏನು?, ನನ್ನ ಪುತ್ರ ಯಾವಾಗ ಬಿಡುಗಡೆಗೊಳ್ಳುತ್ತಾನೆಂದು ನನಗೆ ತಿಳಿಯಬೇಕಿದೆ. ದೇಶದ ಯಾವುದೇ ಪ್ರಮುಖ ವಿಚಾರವನ್ನು ಸೂಕ್ತ ಸಮಯದಲ್ಲಿ ಪರಿಹರಿಸಲಾಗುತ್ತದೆ. ಆದರೆ ನನ್ನ ಪುತ್ರನ ನಾಪತ್ತೆ ಇನ್ನೂ ನಿಗೂಢವಾಗಿದೆ'' ಎಂದು ಅವರು  ಹೇಳಿದ್ದಾರೆ.

ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ (ಬಯೋ ಟೆಕ್ನಾಲಜಿ) ವಿದ್ಯಾರ್ಥಿಯಾಗಿದ್ದ ನಜೀಬ್ ಅಹ್ಮದ್ ಅಕ್ಟೋಬರ್ 15, 2016ರಂದು ವಿವಿ ಕ್ಯಾಂಪಸ್ಸಿನಲ್ಲಿರುವ ತಮ್ಮ ಹಾಸ್ಟೆಲ್ ಕೊಠಡಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾಗುವುದಕ್ಕಿಂತ ಮುಂಚೆ ಅವರಿಗೂ ಕೆಲ ಎಬಿವಿಪಿ ಸದಸ್ಯರಿಗೂ ಜಗಳವಾಗಿತ್ತೆಂದು ಹೇಳಲಾಗಿದೆ. ತಮ್ಮ ಪುತ್ರನ ನಾಪತ್ತೆ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ನಫೀಸಾ ಆರೋಪಿಸಿದ್ದಾರೆ.

ಎಸ್‍ಐಟಿ, ದಿಲ್ಲಿ ಪೊಲೀಸರು, ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ಹಾಗೂ ಈಗ ಸಿಬಿಐ ಕೂಡ ನಜೀಬ್ ಎಲ್ಲಿದ್ದಾರೆಂದು ಪತ್ತೆ ಹಚ್ಚಲು ವಿಫಲವಾಗಿವೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ವಿಫಲವಾಗಿರುವ ಈ ಎಲ್ಲಾ ತನಿಖಾ ಏಜನ್ಸಿಗಳನ್ನು ದಿಲ್ಲಿ ಹೈಕೋರ್ಟ್ ಈಗಾಗಲೇ ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News