ಕುಂದಾಪುರ ಜಪ್ತಿ ಸಮೀಪ ಚಿರತೆ ದಾಳಿ: ಮಹಿಳೆಗೆ ತೀವ್ರ ಗಾಯ

Update: 2019-03-04 13:13 GMT

ಕುಂದಾಪುರ, ಮಾ.4: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕೊಂಬಾಡಿ ಮಂದಾಡಿ ಗ್ರಾಪಂ ವ್ಯಾಪ್ತಿಯ ಜಪ್ತಿ ಸಮೀಪದ ಸುಬ್ಬಣ್ಣಕೆರೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಜಪ್ತಿ ಕೈಲ್‌ಕೆರೆ ಹುಣ್ಸೆಕಟ್ಟೆಯ ನಿವಾಸಿ ಬೀಚ ಬಾಂದಿ ಎಂಬವರ ಪುತ್ರಿ ಪ್ರೇಮಾ ಬಾಂದಿ (24)  ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಮನೆಯಿಂದ ಜಪ್ತಿ ಕರಿಕಲ್‌ ಕಟ್ಟೆಯಲ್ಲಿರುವ ಜಪ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದರು. ಹಾಡಿಯಲ್ಲಿರುವ ಒಳದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಪ್ರೇಮಾ ಅವರ ಮೇಲೆ ಪೊದೆಯಿಂದ ಒಮ್ಮೇಲೆ ಎರಗಿದ ಚಿರತೆ ದಾಳಿ ಮಾಡಿತು.

ಇದರಿಂದ ನೆಲಕ್ಕೆ ಬಿದ್ದ ಪ್ರೇಮಾ ಅವರ ಕಣ್ಣು, ಕಿವಿ, ಕುತ್ತಿಗೆ ಹಾಗೂ ಕೈಗಳಿಗೆ ಚಿರತೆ ಉಗುರಿನಿಂದ ಪರಚಿ ಗಾಯ ಮಾಡಿತ್ತೆನ್ನಲಾಗಿದೆ. ತಕ್ಷಣವೇ ಚಿರತೆ ಅಲ್ಲಿಂದ ಹಾಡಿಯೊಳಗೆ ಓಡಿ ಹೋಗಿ ಮರೆಯಾಯಿತು. ಬಳಿಕ ಪ್ರೇಮಾ ಅವರನ್ನು ಸ್ಥಳೀಯರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದರು.

‘ತನ್ನ ತಾಯಿಯೊಂದಿಗಿದ್ದ ಪ್ರೇಮಾ, ಕೃಷಿ ಮತ್ತು ಹೈನುಗಾರಿಕೆ ನಡೆಸುತ್ತಿದ್ದಾರೆ. ಇಷ್ಟು ದಿನ ಡೈರಿಗೆ ತಾಯಿ ಹಾಲು ತೆಗೆದುಕೊಂಡು ಹೋಗುತ್ತಿದ್ದರೆ, ಇಂದು ಪ್ರೇಮಾ ಹೊರಟಾಗ ಈ ಘಟನೆ ನಡೆದಿದೆ’ ಎಂದು ಪ್ರೇಮಾ ಅವರ ಅಕ್ಕ ಗೀತಾ ತಿಳಿಸಿದ್ದಾರೆ. ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯ ಅಧಿಕಾರಿ ಉದಯ್ ಆಗಮಿಸಿ ಪರಿಶೀಲನೆ ನಡೆಸಿದರು.

‘ಜಪ್ತಿಯಲ್ಲಿ ಚಿರತೆ ಮೊದಲು ಕಾಣಿಸಿಕೊಂಡಿದ್ದರೂ ಸುತ್ತಮುಲಿನ ಪರಿಸರದಲ್ಲಿ ಕೆಲವೊಮ್ಮೆ ರಾತ್ರಿ ವೇಳೆ ಚಿರತೆ ಘರ್ಜಿಸುವ ಶಬ್ದ ಕೇಳುತ್ತದೆ. ಕೆಲವು ವರ್ಷಗಳಿಂದ ಇಲ್ಲಿ ಚಿರತೆ ಹಾವಳಿ ಇದ್ದು, ನಾಲ್ಕೈದು ನಾಯಿಗಳು ಕೂಡ ಅದಕ್ಕೆ ಬಲಿಯಾಗಿವೆ’ ಎಂದು ಜಪ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಜೆ.ಕೆ.ಮಹಾಬಲ ನಾಯ್ಕ ತಿಳಿಸಿದ್ದಾರೆ.

‘ಚಿರತೆ ದಾಳಿ ನಡೆಸಿದ ಕಾಲು ದಾರಿಯಲ್ಲಿ ಪ್ರತಿದಿನ ಜಪ್ತಿ ಶಾಲೆಯ ಮಕ್ಕಳು ಹಾಗೂ ಡೈರಿಗೆ ಹಾಲು ತರುವ ಮಹಿಳೆಯರು ನಡೆದುಕೊಂಡು ಹೋಗುತ್ತಿರುತ್ತಾರೆ. ಆದುದರಿಂದ ಅರಣ್ಯ ಇಲಾಖೆ ಕೂಡಲೇ ಎಚ್ಚರ ವಹಿಸಿ ಚಿರತೆ ಸೆರೆಗೆ ಸೂಕ್ತ ಕ್ರಮ ಜರಗಿಸಬೇಕು’ ಎಂದು ಸಂಘದ ಕಾರ್ಯದರ್ಶಿ ವೆಂಕಟೇಶ್ ಒತ್ತಾಯಿಸಿದ್ದಾರೆ.

ಚಿರತೆ ಸೆರೆಗೆ ಎರಡು ಕಡೆ ಬೋನು

ಮಹಿಳೆ ಮೇಲೆ ಚಿರತೆ ದಾಳಿಯ ಹಿನ್ನೆಲೆಯಲ್ಲಿ ಇಂದು ಜಪ್ತಿ ಸುತ್ತ ಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಾಯಿಮರಿ ಸಹಿತ ಎರಡು ಬೋನುಗಳನ್ನು ಕುಂದಾಪುರ ವಲಯ ಅರಣ್ಯ ಇಲಾಖೆಯವರು ಇರಿಸಿದ್ದಾರೆ.

‘ಕುಂದಾಪುರ ತಾಲೂಕಿನ ಎಲ್ಲ ಕಡೆ ಚಿರತೆ ಇರುವುದು ಸಾಮಾನ್ಯ. ಮಹಿಳೆ ಮೇಲೆ ದಾಳಿ ನಡೆಸಿದ ಚಿರತೆಯನ್ನು ಸೆರೆ ಹಿಡಿಯಲು ಈಗಾಗಲೇ ಎರಡು ಕಡೆಗಳಲ್ಲಿ ಬೋನು ಇರಿಸಲಾಗಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಬೋನುಗಳನ್ನು ಕೂಡ ಬಳಸಿಕೊಳ್ಳಲಾಗುವುದು. ಗಾಯಗೊಂಡ ಮಹಿಳೆಗೆ ಇಲಾಖೆಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಂದಾಪುರ ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್ ತಿಳಿಸಿದ್ದಾರೆ.

‘ಬೆಳಗ್ಗೆ 6.20ಕ್ಕೆ ಮನೆಯಿಂದ ಡೈರಿಗೆ ಹೊರಟಿದ್ದೆ. ಡೈರಿಗೆ ಹತ್ತಿರದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಮ್ಮೇಲೆ ಚಿರತೆ ನನ್ನ ತಲೆಯ ಭಾಗಕ್ಕೆ ದಾಳಿ ಮಾಡಿತು. ಇದರಿಂದ ಕಿವಿ ಹರಿದಿದ್ದು, ಕಣ್ಣು, ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಆ ಕ್ಷಣದಲ್ಲಿ ಏನು ಸಂಭವಿಸಿತು ಎಂದು ನನಗೆ ಗೊತ್ತೆ ಇಲ್ಲ. ನೆಲಕ್ಕೆ ಬಿದ್ದವಳು ಚಿರತೆ ನನ್ನನ್ನು ಬಿಟ್ಟು ಹೋದ ನಂತರ ಹಿಂದೆ ಮನೆಗೆ ನಡೆದು ಕೊಂಡು ಬರುವಾಗ ಸ್ಥಳೀಯರು ನೋಡಿ ಆಸ್ಪತ್ರೆಗೆ ಸಾಗಿಸಿದರು’

-ಪ್ರೇಮಾ ಬಾಂದಿ, ಗಾಯಾಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News