ರಸ್ತೆ ದುರಸ್ತಿಗೆ ಪೌರಾಯುಕ್ತರಿಗೆ ಮನವಿ

Update: 2019-03-04 11:54 GMT

ಪುತ್ತೂರು: ನಗರಸಭಾ ವ್ಯಾಪ್ತಿಯ ಉಜ್ರುಪಾದೆಯಿಮದ ಬಲ್ನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ತನಕದ ರಸ್ತೆಯು ತೀರಾ ಹದೆಗೆಟ್ಟಿದ್ದು, ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಬಲ್ನಾಡು ಗ್ರಾಮದ ಗ್ರಾಮಸ್ಥರು ಸೋಮವಾರ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. 

ಬಲ್ನಾಡು ಗ್ರಾಮದ ಉಜ್ರುಪಾದೆಯ ನಾಗರಿಕರು ಪ್ರತಿನಿತ್ಯ ತಮ್ಮ ಅವಶ್ಯಕತೆಗಳನ್ನು ಪೂರೈಸಲು ಈ ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ. ಬಹಳಷ್ಟು ವರುಷಗಳ ಹಿಂದೆ ಈ ರಸ್ತೆಗೆ ಡಾಮಾರು ಹಾಕಲಾಗಿದ್ದು, ಪ್ರಸ್ತುತ ಇದು ಡಾಮಾರು ರಸ್ತೆಯೂ ಅಲ್ಲ, ಕಚ್ಛಾ ರಸ್ತೆಯೂ ಅಲ್ಲ ಅನ್ನುವ ದುಸ್ಥಿತಿಗೆ ಮುಟ್ಟಿದೆ. ಡಾಮಾರು ಹಾಕುವ ಸಂದರ್ಭದಲ್ಲಿ ಹಾಕಲಾಗಿದ್ದ ಜಲ್ಲಿಕಲ್ಲು ಪೂರ್ತಿ ಎದ್ದು ಹೋಗಿ, ರಸ್ತೆಯ ಬಳಕೆದಾರರು ದುಸ್ಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿದೆ. ದಿನಂಪ್ರತಿ ನೂರಾರು ಮಂದಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕೃಷಿಕಾರ್ಮಿಕರು ಈ ರಸ್ತೆಯನ್ನು ಬಳಸುತ್ತಿದ್ದು, ಈ ರಸ್ತೆಯನ್ನು ಶೀಘ್ರ ಅಭಿವೃದ್ಧಿ ಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಮನವಿಯ ಪ್ರತಿಯನ್ನು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಗೂ ಸಲ್ಲಿಸಲಾಗಿದೆ. 
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯರಾದ  ನವೀನ್ ಡಿ'ಸೋಜಾ ಪಂಜಳ, ಸುನಿಲ್ ಡಿ'ಸೋಜಾ, ಜಲೀಲ್ ಉಜ್ರುಪಾದೆ, ಝಬೈರ್ ಬಲ್ನಾಡು, ಗಿರೀಶ್ ಪದವೂರು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News