ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ವಿವಿ ಪ್ಯಾಟ್ ಮತಯಂತ್ರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
ಪುತ್ತೂರು; ಮುಂಬರುವ ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಗೊಂದಲ ರಹಿತವಾಗಿ ನಡೆಸುವುದು ನಮ್ಮ ಮುಂದಿರುವ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಚುನಾವಣೆ ನಿರ್ವಹಣೆಗೆ ಹಾಗೂ ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಎಲ್ಲಾ ತಯಾರಿ ನಡೆಸಲಾಗುತ್ತಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ ಹೇಳಿದರು.
ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ನಡೆದ ವಿವಿ ಪ್ಯಾಟ್ ಮತಯಂತ್ರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತಯಂತ್ರದ ಬಗ್ಗೆ ಜನತೆಯಲ್ಲಿರುವ ಆತಂಕ-ಅನುಮಾನಗಳನ್ನು ನಿವಾರಿಸುವ ಹಾಗೂ ಮತ ಚಲಾಯಿಸುವ ಕುರಿತು ಅರಿವು ಮೂಡಿಸುವ ಕೆಲಸವನ್ನು ಕ್ಷೇತ್ರದ 146 ಕೇಂದ್ರಗಳನ್ನು ಗುರುತಿಸಿ ಕಾಲೇಜು ಮಕ್ಕಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 21 ಸಾವಿರ ಮಂದಿಗೆ ನೀಡಲಾಗುತ್ತಿದೆ ಎಂದ ಅವರು ಸದೃಢ ಸರ್ಕಾರ ರಚನೆಗೆ ಮತದಾರರು ಜವಾಬ್ದಾರಿಯುತವಾಗಿ ಮತಚಲಾವಣೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಹಿಂದಿನ ಚುನಾವಣೆಗಳಲ್ಲಿ ಮತದಾರರಿಗೆ ನೀಡಲಾಗುತ್ತಿದ್ದ ಮತದಾರರ ಚೀಟಿ ಕೂಡಾ ಮತದಾನಕ್ಕೆ ದಾಖಲೆಯಾಗಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರ ಚೀಟಿಯನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸಲಾಗುವುದಿಲ್ಲ. ಚುನಾವಣಾ ಆಯೋಗದಿಂದ ಪಡೆದುಕೊಂಡಿರುವ ಮತದಾರರ ಗುರುತು ಕಾರ್ಡು ಸಹಿತ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಮಾತನಾಡಿ ವಿವಿ ಪ್ಯಾಟ್ ಮತಯಂತ್ರದಲ್ಲಿ ಪಾರದರ್ಶಕತೆ ಇದೆ ಎಂಬುವುದನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಮಹಾಲಿಂಗೇಶ್ವರ ಐ.ಟಿ.ಐ. ಸಂಸ್ಥೆಯ ಪ್ರಶಾಂತ್ ನಾಯ್ಕ್ ಅವರು ವಿವಿ ಪ್ಯಾಟ್‍ನಲ್ಲಿ ಮತ ಚಲಾವಣೆ ಮತ್ತು ಮತಯಂತ್ರದ ಪ್ರಾತ್ಯಕ್ಷಿಕೆ ನೀಡಿ ಮತದಾನ ಮಾಡುವ ಪ್ರಕ್ರಿಯೆಗಳನ್ನು ವಿವರಿಸಿದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಸದಸ್ಯರಾದ ಸಂಶುದ್ದೀನ್ ಸಂಪ್ಯ ನಿರೂಪಿಸಿದರು. ಮೇಘಾ ಪಾಲೆತ್ತಾಡಿ ವಂದಿಸಿದರು.