ಕಾಂಗ್ರೆಸ್‌ಗೆ ಭಯೋತ್ಪಾದಕರ ಚಿಂತೆ: ಕೋಟ ಶ್ರೀನಿವಾಸ್ ಪೂಜಾರಿ

Update: 2019-03-04 13:36 GMT

ಮಂಗಳೂರು, ಮಾ.4: ಬಿಜೆಪಿಗೆ ರಾಷ್ಟ್ರ ಮತ್ತು ರಾಷ್ಟ್ರದ ಸೈನಿಕರ ಬಗ್ಗೆ ಚಿಂತೆ ಇದ್ದರೆ, ಕಾಂಗ್ರೆಸ್‌ಗೆ ಭಯೋತ್ಪಾದಕರ ಚಿಂತೆ ಕಾಡುತ್ತಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್-2 ವಿದ್ಯಮಾನಗಳ ಬಗ್ಗೆ ಕೆಲ ನಾಯಕರು ಅನೇಕ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ಸಚಿವ ಖಾದರ್ ಕೂಡ ವಿಮರ್ಶೆ ಮಾಡದೆಯೇ ‘ಕಾಂಗ್ರೆಸ್‌ಗೆ ದೇಶದ ಚಿಂತೆ ಬಿಜೆಪಿಗೆ ಸೀಟಿನ ಚಿಂತೆ’ ಎನ್ನುವ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ಸಚಿವ ಯು.ಟಿ.ಖಾದರ್ ವಿಷಯದ ಬಗ್ಗೆ ಸ್ಪಷ್ಟವಾದ ಮನವರಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನ ಉಗ್ರಗಾಮಿಗಳ ವಿರುದ್ಧ ಸಿಡಿದು ಸರ್ಜಿಕಲ್ ಸ್ಟ್ರೈಕ್-2ನ್ನು ಅಮೆರಿಕ, ಇಂಗ್ಲೆಂಡ್, ರಷ್ಯಾ, ಪ್ರಾನ್ಸ್, ಚೀನಾ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿಕೊಂಡಿವೆ. ಭಯೋತ್ಪಾದಕ ರಾಷ್ಟ್ರಕ್ಕೆ ಉಗ್ರಗಾಮಿಗಳೇ ಆಶಾಕಿರಣವಾಗಿದ್ದು, ಆ ರಾಷ್ಟ್ರ ಹಾಗೂ ಉಗ್ರಗಾಮಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಮಹಾ ಘಟಬಂಧನ್‌ದ ಕೆಲವು ಮುಖಂಡರು ಮತ್ತು ಭಾರತದಲ್ಲಿರುವ ಕೆಲವರಿಗೆ ಭಯೋತ್ಪಾದನೆ ಆಶಾಕಿರಣವಾಗಿದೆ ಎಂದು ಆರೋಪಿಸಿದರು.

ಕೆಲ ಬುದ್ಧಿವಂತರು ಸರ್ಜಿಕಲ್ ಸ್ಟ್ರೈಕ್ ಮಾಡಿದ ಪ್ರತಿಯೊಂದು ಹೆಣಗಳ ಸಾಕ್ಷಿಗಳನ್ನು ಕೇಳುತ್ತಿದ್ದಾರೆ. ಭಯೋತ್ಪಾದನೆ ಶಾಲೆ, ಶಿಬಿರಗಳ ಮೇಲೆ ಶತ್ರು ದೇಶ ಭಾರತ ದಾಳಿ ಮಾಡಿ ಪುಡಿಗಟ್ಟಿದೆ ಎಂದು ಸ್ವತಃ ಮಸೂದ್ ಅಝರ್ ಸಹೋದರ ಹೇಳಿಕೆ ನೀಡಿದ್ದಾನೆ. ಇಂತಹ ಬಲಾಢ್ಯ ಸಾಕ್ಷಿಗಳಿದ್ದರೂ ಪ್ರಧಾನಿಯನ್ನು ದೂಷಿಸುತ್ತಿರುವುದು ಖಂಡನೀಯ ಎಂದರು.

ಸಿಎಂ ಹೇಳಿಕೆ ವಾಪಸಾತಿಗೆ ಆಗ್ರಹ: ‘ಭಾರತದ ಸೈನಿಕರು ಪ್ರಾಣದ ಹಂಗು ತೊರೆದು ಭಯೋತ್ಪಾದನೆ ಮಟ್ಟ ಹಾಕಿದ್ದಕ್ಕೆ ಜನತೆ ಬೀದಿಯಲ್ಲಿ ನಿಂತು ಸಂಭ್ರಮಿಸಿದ್ದಾರೆ. ಇದರಿಂದ ಇನ್ನೊಂದು ಕೋಮಿಗೆ ಬೇಸರವಾಗುತ್ತದೆ’ ಎನ್ನುವ ಮೂಲಕ ಸರ್ಜಿಕಲ್ ಸ್ಟ್ರೈಕ್ ವಿದ್ಯಮಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನಂಬಲು ಸಾಧ್ಯವಾಗುತ್ತಿಲ್ಲ. ಇದು ಅತಿ ನೋವಿನ ಸಂಗತಿಯಾಗಿದೆ. ಸಮಾಜದಲ್ಲಿ ರಾಷ್ಟ್ರ ಮತ್ತು ಸೈನಿಕರ ವಿಚಾರ ಬಂದಾಗ ಜಾತಿ, ಧರ್ಮಗಳನ್ನು ಎಳೆದು ತರುತ್ತಿರುವುದು ಅತ್ಯಂತ ಖಂಡನಾರ್ಹ. ಈ ಮಾತನ್ನು ಸಿಎಂ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಮಟ್ಟಕ್ಕೆ ವಿಸ್ತರಿಸಲಿ: ಕೇಂದ್ರ ಸರಕಾರವು ಕೃಷಿ ಸಮ್ಮಾನ ಯೋಜನೆ ಜಾರಿ ತಂದಿದ್ದು, ಅಂಕಿ-ಅಂಶ ಪ್ರಕಾರ ರಾಜ್ಯದ 76 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯ ಸರಕಾರವು ಅರ್ಜಿ ಸ್ವೀಕರಿಸುವ ಮಟ್ಟದಲ್ಲಿ ಶೀಘ್ರ ಅವಧಿಯಲ್ಲಿ ಕೇವಲ 16 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ನಾಡಕಚೇರಿ ಮುಂಭಾಗ ಜನರು ಸರದಿಸಾಲು ನಿಲ್ಲುವ ಪರಿಸ್ಥಿತಿ ಇದೆ. ಕೂಡಲೇ ಸರಕಾರವು ತಾಲೂಕು, ಗ್ರಾಪಂ ಮಟ್ಟದಲ್ಲಿ ವಿಸ್ತರಿಸಿ ಎಲ್ಲ ಅರ್ಜಿಗಳನ್ನು ಪಡೆಯಲು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಮೋದಿ ಪರ ಜನಾಭಿಪ್ರಾಯ: ಚಿತ್ರಮಂದಿರಗಳನ್ನು ರಾಜ್ಯದ ಜಂಟಿ ಸರಕಾರದ ಸಾಧನೆಗಳ ಪ್ರಚಾರ ನೇರವಾಗಿ ಬರುತ್ತಿದೆ. ತಕ್ಷಣ ಪ್ರೇಕ್ಷಕರು ‘ಮೋದಿ ಮೋದಿ’ ಎಂದು ಉದ್ಘೋಷಣೆಗಳನ್ನು ಕೂಗುತ್ತಿದ್ದಾರೆ. ಶಾಲಾ ವಿಚಾರ ಗೋಷ್ಠಿಗಳಲ್ಲಿ ಯುವಕರು, ವಿದ್ಯಾರ್ಥಿಗಳು ಮೋದಿ ಪರ ಅಭಿಪ್ರಾಯಗಳನ್ನು ನೀಡುತ್ತಿರುವುದು ರಾಜ್ಯ ಸರಕಾರವನ್ನು ಕಂಗೆಡಿಸಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರಧಾನಿ ಮೋದಿ ಪರ ಲೋಕಸಭೆ ಚುನಾವಣೆಗೆ ಜನಾಭಿಪ್ರಾಗಳು ಮೂಡಿಬರುತ್ತಿವೆ ಎಂದರು.

ಇವಿಎಂ ಮೇಲೆ ಕಾಂಗ್ರೆಸ್ ಶಂಕೆ!: ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪರಾಜಯಗೊಂಡಿರುವ ಕ್ಷೇತ್ರಗಳಲ್ಲಿ ಇವಿಎಂ ಮತಯಂತ್ರದ ಮೇಲೆ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಆದರೆ ಯು.ಟಿ.ಖಾದರ್ ಗೆದ್ದಂತಹ ಉಳ್ಳಾಲ ಕ್ಷೇತ್ರದಲ್ಲಿ ಯಾವುದೇ ಅನುಮಾನ, ಶಂಕೆ ವ್ಯಕ್ತವಾಗಿಲ್ಲ. ಉಪಚುನಾವಣೆಯಲ್ಲಿ ಗೆದ್ದಾಗ ಯಾವುದೇ ಶಂಕೆ ವ್ಯಕ್ತಪಡಿಸದ ಇಂತಹವರು ಮುಂದಿನ ಲೋಕಸಭಾ ಚುನಾವಣೆಗೆ ಮತಯಂತ್ರಗಳು ಸರಿಯಿಲ್ಲ ಎನ್ನುವ ಗೊಂದಲದ ಮಾತುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಘೋಷಿಸಿದ ತಾಲೂಕಿಗೆ ಅನುದಾನವಿಲ್ಲ: ಹೊಸ ತಾಲೂಕುಗಳನ್ನು ರಚನೆ ಮಾಡುವುದಾಗಿ ಸರಕಾರ ಘೋಷಿಸಿದೆ. ರಾಜ್ಯ ಸರಕಾರ ಈಗಾಗಲೇ ಮಾಡಿರುವ ತಾಲೂಕುಗಳಿಗೆ ಪೂರ್ಣ ಪ್ರಮಾಣದ ಇಲಾಖೆಗಳನ್ನೇ ಇನ್ನು ವರ್ಗಾಯಿಸಿಲ್ಲ. ಅಧಿಕಾರ ವಿಕೇಂದ್ರೀಕರಣವಾಗಬೇಕು. ತಾಲೂಕುಗಳು ಸಣ್ಣದಾಗಬೇಕು. ಆಡಳಿತ ಯಂತ್ರ ವ್ಯವಸ್ಥಿತವಾಗಿ ನಡೆಯಬೇಕು ಎನ್ನುವುದು ಸರಿಯಿದೆ. ಕಳೆದ ಬಾರಿಯ ಸರಕಾರವು ಘೋಷಿಸಿದ ತಾಲೂಕುಗಳಿಗೆ ಯಾವುದೇ ಇಲಾಖೆಗಳನ್ನು ವರ್ಗಾಯಿಸಿಲ್ಲ. ಅನುದಾನವನ್ನು ನೀಡಿಲ್ಲ. ಅಧಿಕಾರಿಗಳನ್ನು ನಿಯೋಜನೆ ಮಾಡಿಲ್ಲ. ಇಂತಹ ಸ್ಥಿತಿಯಲ್ಲಿ ಮತ್ತೆ ಹೊಸ ತಾಲೂಕುಗಳ ರಚನೆಯನ್ನು ಜನತೆ ನಂಬುವ ಸ್ಥಿತಿಯಲ್ಲಿಲ್ಲ. ಸರಕಾರವು ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಶುದ್ಧ ನೀರಿನ ಘಟಕ ಅವ್ಯವಹಾರ; ಸದನ ಸಮಿತಿ ರಚನೆಗೆ ಆಗ್ರಹ
ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕೆಲವು ಶುದ್ಧ ನೀರಿನ ಘಟಕಗಳಿಗೆ ಮೂರುವರೆ ಲಕ್ಷ, ಇನ್ನು ಕೆಲವು ಘಟಕಗಳಿಗೆ 9 ಲಕ್ಷ ರೂ.ನ್ನು ಹಂಚಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಶುದ್ಧ ನೀರಿನ ಘಟಕಗಳಿಗೆಂದು ಮಹಾರಾಷ್ಟ್ರದ ಖಾಸಗಿ ಕಂಪೆನಿಗಳಿಗೆ ಉತ್ತೇಜನ ಕೊಟ್ಟು ಭಾರೀ ಪ್ರಮಾಣದಲ್ಲಿ ವ್ಯವಹಾರ ನಡೆಸಲಾಗಿದೆ. ಹೆಚ್ಚಿನ ಸಂಖ್ಯೆಯ ಶುದ್ಧ ನೀರಿನ ಘಟಕಗಳ ಕಾರ್ಯ ನಿರ್ವಹಿಸುತ್ತಿಲ್ಲ. ಶೇ.70ರಷ್ಟು ಘಟಕಗಳನ್ನು ಜೀರ್ಣಾವಸ್ಥೆಯಲ್ಲಿವೆ. ಅದರಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಿದದಾಗ ರಾಜ್ಯ ಸರಕಾರ ನಿರ್ಲಕ್ಷಿಸಿ ಇದನ್ನು ಮುಂದೂಡಿತು. ರಾಜ್ಯ ಸರಕಾರ ತನ್ನ ಮೊಂಡುವಾದವನ್ನು ಬಿಡುತ್ತಿಲ್ಲ ಎಂದರು.

ರಾಜ್ಯದಲ್ಲಿನ ಒಟ್ಟು 16 ಸಾವಿರ ಶುದ್ಧ ನೀರಿನ ಘಟಕಗಳ ಬಗ್ಗೆ ಅಧ್ಯಯನ ಮಾಡಲು ಬಿಜೆಪಿಯಿಂದ ಸಮಿತಿಯನ್ನು ರಚಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ರಾಜ್ಯಾದ್ಯಂತ ತೆರಳಿ ಅಧ್ಯಯನ ನಡೆಸಿ, ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News