×
Ad

ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

Update: 2019-03-04 19:47 IST

ಮಂಗಳೂರು, ಮಾ.4: ನಗರದ ಪುರಭವನದಲ್ಲಿ ನಡೆದ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ 12ನೇ ವಸಂತೋತ್ಸವ, ಕಲಾ ಸಂಭ್ರಮ 2019 ಹಾಗೂ ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಚಿತ್ರನಟ ರಮೇಶ್ ಸೇರಿದಂತೆ ಹಲವರಿಗೆ ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ರೈತ ದೇಶದ ಬೆನ್ನೆಲುಬು. ಬಡವರ ಮನೆಯ ಅನ್ನ ಯಾವತ್ತೂ ನಮ್ಮ ಮನೆಯ ಚಿನ್ನವಾಗಬಾರದು ಮತ್ತು ಪುರಸ್ಕಾರಗಳು ಅಪಾತ್ರರಿಗೆ ಪ್ರಾಪ್ತವಾಗಬಾರದು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜನರು ಮುಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್‌ನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ರಘು ಇಡ್ಕಿದು ಅಭಿನಂದನಾ ಭಾಷಣ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಹಿರಿಯ ನಟಿ ರಾಧಾರಾಮಚಂದ್ರ, ಯುಗಪುರುಷ ಮಾಸ ಪತ್ರಿಕೆಯ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಸ್ಪಾರ್ ಹೈಪರ್ ಮಾರ್ಕೆಟ್‌ನ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಕಡಂಬಾರ್, ಪ್ರತಿಷ್ಠಾನದ ಸಂಚಾಲಕಿ ಲತಾ ಕೃಷ್ಣದಾಸ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚಲನಚಿತ್ರ ಹಿರಿಯ ನಟ ರಮೇಶ್ ಭಟ್, ಹಿರಿಯ ಚಿತ್ರನಟಿ ಕಮನೀಧರನ್, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಕಲಾ ವಿಮರ್ಶಕಿ ವೈ.ಕೆ.ಸಂಧ್ಯಾ ಶರ್ಮ, ಸಿನಿಮಾ ಪತ್ರಿಕೋದ್ಯಮದಲ್ಲಿ ಗಣೇಶ್ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಪುತ್ತೂರು, ಜಾದೂ ಕ್ಷೇತ್ರದಿಂದ ಅಂತರರಾಷ್ಟ್ರೀಯ ಜಾದುಗಾರ ಕುದ್ರೋಳಿ ಗಣೇಶ್, ಸಮಾಜ ಸೇವಾ ಕ್ಷೇತ್ರದಿಂದ ಕಾಂತಾಡಿಗುತ್ತು ಹರೀಶ್ ಪೆರ್ಗಡೆಯವರಿಗೆ 2018-19ನೇ ಸಾಲಿನ ಸಾಧನಾ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಾಧನಾ ಯುವ ರಾಜ್ಯ ಪ್ರಶಸ್ತಿಯನ್ನು ಚಲನಚಿತ್ರ ನಿರ್ದೇಶಕ ಲೇಖಕ ಇಸ್ಮಾಯೀಲ್ ಮೂಡುಶೆಡ್ಡೆ ಅವರಿಗೆ ನೀಡಲಾಯಿತು. ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರವನ್ನು ವರನಂದಿ ಮಹಿಮೆ ಕವನ ಸಂಕಲನಕ್ಕಾಗಿ ಜ್ಯೋತಿ ಗುರುಪ್ರಸಾದ್, ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರವನ್ನು ಬೂದಿ ಮತ್ತು ಕೆಂಡ ಕಥಾ ಸಂಕಲನಕ್ಕೆ ಬಿ.ಆರ್. ಪೊಲೀಸ್ ಪಾಟೀಲ್ ಬಣಹಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ನಂದಗೋಕುಲ ತಂಡದಿಂದ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ನಾಟ್ಯೋಲ್ಲಾಸ, ಮೂಕಾಂಬಿಕ ಚೆಂಡೆ ಬಳಗದಿಂದ ಚೆಂಡೆನಾದ ವೈಭವ, ಕುದ್ರೋಳಿ ಗಣೇಶ್ ಬಳಗದಿಂದ ಜಾದೂ ಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಅದೃಷ್ಟವಂತ ಪ್ರೇಕ್ಷಕರಿಗೆ ಚೀಟಿ ಎತ್ತುವ ಮೂಲಕ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮಂಜುನಾಥ್, ದೀಪಕ್ ಪಡೀಲ್, ಶೈಲಜಾ ಶ್ರೀನಿವಾಸ್, ಶಕುಂತಳಾ ಶ್ರೀನಿವಾಸ್, ರಾಜೇಶ್ವರಿ ಮಂಜುನಾಥ್, ಸಾಂಗ್ಲಿ ಶ್ರೀನಿವಾಸ್, ರಜತ್ ಕೃಷ್ಣದಾಸ್, ಸ್ನೇಹ, ವಸುಧಾ, ಲಹರಿ, ಸಾಗರ್, ಪವಿತ್ರ, ಸಿಂಚನ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪಲತಾ ಕಾರಂತ್ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಆರ್.ಜೆ. ಪ್ರಸನ್ನ, ಉಮೇಶ್ ಕಾರಂತ್, ವಿಜೇಶ್ ದೇವಾಡಿಗ ಮಂಗಳಾದೇವಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News