×
Ad

ಮೊಳಹಳ್ಳಿ ಅಕ್ರಮ ಮರಳುಗಾರಿಕೆಗೆ ದಾಳಿ: 18 ಮಂದಿ ಬಂಧನ; ದೋಣಿ, ಟಿಪ್ಪರ್, ಕಾರು ವಶ

Update: 2019-03-04 21:57 IST

ಕುಂದಾಪುರ, ಮಾ.4: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಳಹಳ್ಳಿ ಕೈಲ್ಕೆರೆ ಎಂಬಲ್ಲಿರುವ ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಮಾ.3ರಂದು ತಡರಾತ್ರಿ ವೇಳೆ ದಾಳಿ ನಡೆಸಿದ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ನೇತೃತ್ವದ ತಂಡ 18 ಮಂದಿಯನ್ನು ಬಂಧಿಸಿ, ದೋಣಿ, ಟಿಪ್ಪರ್, ಕಾರು ಸೇರಿದಂತೆ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಭರತ್ ಶೆಟ್ಟಿ, ಅನಿಲ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಸುರೇಶ್ ಕುಮಾರ್, ಅನುಪ್, ಜಯ ಪ್ರಕಾಶ್ ಹಾಗೂ 12 ಮಂದಿ ಉತ್ತರ ಭಾರತದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ದೊರೆತ ಮೂರು ಯುನಿಟ್ ಮರಳು ಸಹಿತ ಟಿಪ್ಪರ್, ಮೂರು ಕಾರುಗಳು, ಒಂದು ಬೈಕ್, 12 ದೋಣಿಗಳನ್ನು ಪೋಲೀಸರು ವಶ ಪಡಿಸಿಕೊಂಡಿದ್ದಾರೆ.

ಅವ್ಯಾಹತವಾಗಿ ನಡೆಯುತ್ತಿದ್ದ ಮರಳುಗಾರಿಕೆ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ರಾತ್ರಿ 11ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದ ಎಎಸ್ಪಿ ನೇತೃತ್ವದ ಪೊಲೀಸರು, ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರನ್ನು ತಡೆದರು. ಈ ವೇಳೆ ಚಾಲಕ ಉಮೇಶ್ ಪರಾರಿಯಾಗಿದ್ದು, ಟಿಪ್ಪರನ್ನು ಪರಿಶೀಲಿಸಿ ದಾಗ ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಕಂಡುಬಂತ್ತೆನ್ನಲಾಗಿದೆ.

ಆ ವೇಳೆ ಐ10 ಕಾರು ಮತ್ತು ಬೈಕಿನಲ್ಲಿ ಸ್ಥಳಕ್ಕೆ ಬಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಭರತ್ ಶೆಟ್ಟಿ, ಸುರೇಶ್ ಕುಮಾರ್, ಜಯಪ್ರಕಾಶ್‌ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಂತರ ಪೊಲೀಸರ ವಾಹನವನ್ನು ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದ ಹರಿಪ್ರಸಾದ್ ಶೆಟ್ಟಿ ಹಾಗೂ ಅನಿಲ್ ಶೆಟ್ಟಿ ಹಾಗೂ ಇತರರನ್ನು ಪೊಲೀಸರು ಕಾರು ಸಹಿತ ವಶಕ್ಕೆ ಪಡೆದುಕೊಂಡರೆನ್ನ ಲಾಗಿದೆ. ಅದೇ ರೀತಿ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ 12 ಮಂದಿ ಕಾರ್ಮಿಕರ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್, ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News