ಬಡ್ಡಿ ವ್ಯವಹಾರದ ಹಣ ಕೇಳಿದಕ್ಕೆ ಹೆಮ್ಮಾಡಿ ಮಹಿಳೆಯ ಕೊಲೆ?
ಕುಂದಾಪುರ, ಮಾ.4: ಕಟ್ಬೇಲ್ತೂರು ಗ್ರಾಮದ ಹೆಮ್ಮಾಡಿ ಸಮೀಪದ ಹರೆಗೋಡು ನಿವಾಸಿ ಗುಲಾಬಿ ಮೊಗವೀರ(55) ಎಂಬವರ ನಿಗೂಢ ಸಾವಿನ ಪ್ರಕರಣದ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಯ ವರದಿಯು ನಾಳೆ ಪೊಲೀಸರ ಕೈಸೇರಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬುದಾಗಿ ತಿಳಿದು ಬಂದಿದೆ. ರವಿವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೃತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಗಾಗಿ ರಚಿಸಿರುವ ಏಳು ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.
ಒಂಟಿಯಾಗಿ ಬದುಕು ಸಾಗಿಸುತ್ತಿದ್ದ ಗುಲಾಬಿ ಮೀನು ವ್ಯಾಪಾರದ ಜೊತೆ ಸಣ್ಣ ಪುಟ್ಟ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮನೆ ಸಮೀಪದಲ್ಲೇ ಇರುವ ಫ್ಯಾಕ್ಟರಿಯ ಕಾರ್ಮಿಕರಿಗೆ ಗುಲಾಬಿ ಬಡ್ಡಿಗಾಗಿ ಹಣ ನೀಡುತ್ತಿದ್ದರೆಂದು ತಿಳಿದುಬಂದಿದೆ. ಈ ಬಡ್ಡಿ ಹಣ ಕೇಳಿದ ಕಾರಣಕ್ಕಾಗಿ ಗುಲಾಬಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತ ವಾಗಿದೆ.
ಕೊಲೆಗೈದ ಬಳಿಕ ದುಷ್ಕರ್ಮಿಗಳು ಗುಲಾಬಿ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಇದೀಗ ಪೊಲೀಸರು ಇದೇ ದಿಕ್ಕಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದು, ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.