ಬೆಳಕಿನ ಮೀನುಗಾರಿಕೆ ವಿರುದ್ಧ ಮಾ.5ರಂದು ಮಲ್ಪೆಯಲ್ಲಿ ಪ್ರತಿಭಟನೆ
ಮಲ್ಪೆ, ಮಾ.4: ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಪರ್ಸೀನ್ ಮೀನುಗಾರರಿಂದ ನಡೆಯುತ್ತಿರುವ ಬೆಳಕು ಮೀನುಗಾರಿಕೆ ವಿರುದ್ಧ ಮೀನುಗಾರಿಕೆ ಇಲಾಖೆ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘದ ನೇತೃದಲ್ಲಿ ಮಾ.5ರಂದು ಮಲ್ಪೆ ಮೀನುಗಾರಿಕಾ ಉಪ ನಿರ್ದೇಶಕರ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ನಡೆದ ಆಳಸಮುದ್ರ ಮೀನುಗಾರರ ಸಂಘದ ತುರ್ತು ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದು ಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಕಾನೂನು ರೀತಿಯ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅದೇ ದಿನ ಜಿಲ್ಲಾಧಿಕಾರಿಗಳ ಕಚೇರಿಗೂ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಎಂದು ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ ತಿಳಿಸಿದ್ದಾರೆ.
ಮಲ್ಪೆ ಬಂದರಿನಲ್ಲಿ ಫೆ.27ರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳದೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ನ್ಯಾಯ ಸಿಗುವವರಿಗೆ ಈ ಮುಷ್ಕರವನ್ನು ಮುಂದುವರೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಆನಂದ ಅಮೀನ್, ಕಾರ್ಯದರ್ಶಿ ಭುವನೇಶ್ ಕೋಟ್ಯಾನ್, ಕೋಶಾಧಿಕಾರಿ ಪಾಂಡುರಂಗ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಮಿಥುನ್ ಕರ್ಕೇರ, ಹರೀಶ್ ಜಿ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.