×
Ad

​ಎಸ್‌ಸಿ,ಎಸ್‌ಟಿ ಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ

Update: 2019-03-04 23:13 IST

ಉಡುಪಿ, ಮಾ.4: ಕರ್ನಾಟಕ ರಾಜ್ಯ ಎಸ್‌ಸಿ,ಎಸ್‌ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಎಸ್‌ಸಿ,ಎಸ್‌ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಮಾವೇಶ ಮಾ.9ರ ಶನಿವಾರ ಆದಿಉಡುಪಿಯಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಮಣೂರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳಲ್ಲಿ ಅಕ್ಷರದ ಅರಿವು ಮೂಡಿಸಿದ ಅಕ್ಷರ ಮಾತೆ ಸಾವಿತ್ರಿ ಬಾ ಪುಲೆ ಅವರ ಜೀವನಾದರ್ಶನ ತತ್ವದಡಿಯಲ್ಲಿ 2014ರಲ್ಲಿ ಸರಕಾರದ ಮಾನ್ಯತೆ ಪಡೆದ ಈ ಸಂಘ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಾಮಾಜಿಕ ಪರಿವರ್ತನಕಾರರಾದ ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ, ಸಾವಿತ್ರಿ ಬಾ ಪುಲೆ, ಸಾಹು ಮಹಾರಾಜ್, ನಾರಾಯಣಗುರು, ಕುದ್ಮುಲ್ ರಂಗರಾಯರನ್ನು ಮರು ಅಧ್ಯಯನ ಮಾಡಿ ಅರಿವಿನ ಹರಿವನ್ನು ವಿಸ್ತರಿಸಿಕೊಂಡು, ನಮ್ಮ ವೃತ್ತಿಕೌಶಲ್ಯ ಹಾಗೂ ಆತ್ಮಗೌರವವನ್ನು ವೃದ್ಧಿಸಿಕೊಂಡು, ಶಾಲೆಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಲು, ನಮ್ಮ ಸಮುದಾಯದ ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ನಾರಾಯಣ ಮಣೂರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇದೇ ಮಾ.9ರ ಶನಿವಾರ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್‌ಸಿ, ಎಸ್‌ಟಿ ಶಿಕ್ಷಕರಿಗಾಗಿ ಒಂದು ದಿನ ವಿಶೇಷ ಶೈಕ್ಷಣಿಕ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಸಮಾವೇಶವನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಶೇಷಶಯನ ಕಾರಿಂಜ ಉದ್ಘಾಟಿಸಲಿದ್ದು, ಎಸ್‌ಸಿ, ಎಸ್‌ಟಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿ.ಟಿ. ವೆಂಕಟೇಶಯ್ಯ, ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣಾಧಿಗಾಕಿ ಹಾಕಪ್ಪ ಆರ್.ಲಮಾಣಿ, ಮಂಗಳೂರು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಲೋಕೇಶ್ ಸಿ. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಬಳಿಕ 11ಗಂಟೆಗೆ ನಾರಾಯಣ ಮಣೂರು ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಭಾಗವಹಿಸುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಿಕ್ಷಕರಿಗೂ ಓಓಡಿ ಸೌಲಭ್ಯವಿದೆ.ಉಡುಪಿ ಜಿಲ್ಲೆಯಲ್ಲಿ ಸುಮಾರು 800 ಮಂದಿ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಎಸ್‌ಸಿ,ಎಸ್‌ಟಿ ಶಿಕ್ಷಕರಿದ್ದು, ಇವರಲ್ಲಿ 400-500 ಮಂದಿ ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಾರಾಯಣ ಮಣೂರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಸುಂದರ ಎ, ಉಪಾಧ್ಯಕ್ಷ ವೆಂಕಟ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಬಿ., ಎಂ.ಫಕೀರಪ್ಪ, ಶೇಸು, ವರದರಾಜ ಬಿರ್ತಿ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News