ಎಚ್ಐವಿ ವೈರಾಣುವಿನಿಂದ ಮುಕ್ತಗೊಂಡ ವ್ಯಕ್ತಿ: ಜಗತ್ತಿನ 2ನೇ ಪ್ರಕರಣ

Update: 2019-03-05 08:43 GMT

ಲಂಡನ್, ಮಾ.5: ಬ್ರಿಟನ್ ದೇಶದ ಎಚ್ಐವಿ ಪೀಡಿತ ವ್ಯಕ್ತಿಯೊಬ್ಬರು ಅಸ್ಥಿ ಮಜ್ಜೆ ಕಸಿ ಚಿಕಿತ್ಸಾ ವಿಧಾನದ ಮೂಲಕ ಏಡ್ಸ್  ವೈರಾಣುವಿನಿಂದ ಮುಕ್ತಗೊಂಡ ಜಗತ್ತಿನ ಎರಡನೇ ವ್ಯಕ್ತಿಯಾಗಿದ್ದಾರೆ. ಅತ್ಯಂತ ವಿರಳ ಜೆನೆಟಿಕ್ ಮ್ಯುಟೇಶನ್ ಹೊಂದಿರುವ ಹಾಗೂ ಅದರಿಂದಾಗಿ ಎಚ್ ಐವಿ ನಿರೋಧಕ ಶಕ್ತಿ ಹೊಂದಿದ ದಾನಿಯೊಬ್ಬರಿಂದ ಅಸ್ಥಿ ಮಜ್ಜೆ ಸ್ಟೆಮ್ ಸೆಲ್ ಗಳನ್ನು ಕಸಿಗೊಳಿಸಿದ ಮೂರು ವರ್ಷಗಳ ನಂತರ ಹಾಗೂ ಎಆರ್‍ ಟಿ ಔಷಧಿಗಳನ್ನು ನಿಲ್ಲಿಸಿ 18 ತಿಂಗಳುಗಳ ನಂತರ ಹಲವಾರು ಪರೀಕ್ಷೆಗಳ ನಂತರ ಈ ವ್ಯಕ್ತಿಯನ್ನು ಎಚ್ ಐವಿ ಮುಕ್ತ ಎಂದು ಘೋಷಿಸಲಾಗಿದೆ.

``ಆ ವ್ಯಕ್ತಿಯ ದೇಹದಲ್ಲಿ ಎಚ್ ಐವಿ ವೈರಾಣು ಎಲ್ಲಿಯೂ ಈಗ ಪತ್ತೆಯಾಗಿಲ್ಲ'' ಎಂದು  ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡದ ಸಹ-ನಾಯಕರಾದ ಪ್ರೊಫೆಸರ್ ಹಾಗೂ ಎಚ್‍ಐವಿ ತಜ್ಞ ಡಾ. ರವೀಂದ್ರ ಗುಪ್ತಾ ಹೇಳಿದ್ದಾರೆ.

ವಿಜ್ಞಾನಿಗಳು ಭವಿಷ್ಯದಲ್ಲಿ ಒಂದು ದಿನ ಏಡ್ಸ್ ಗೆ ಅಂತ್ಯ ಹಾಡಬಹುದು ಎಂಬುದಕ್ಕೆ ಈ ಪ್ರಕರಣ  ಒಂದು ಸಾಕ್ಷಿಯಾಗಿದೆ.

ಈಗ ಕೇಂಬ್ರಿಡ್ಜ್ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗುಪ್ತಾ ಯುನಿವರ್ಸಿಟಿ ಕಾಲೇಜ್, ಲಂಡನ್ ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಈ ರೋಗಿಗೆ ಚಿಕಿತ್ಸೆ ನೀಡಿದ್ದರು. ಆತ 2003ರಲ್ಲಿ ಎಚ್‍ಐವಿ ಸೋಂಕಿಗೊಳಗಾಗಿದ್ದು, 2012ರಲ್ಲಿ  ಹೊಡ್ಗ್ಕಿನ್ಸ್ ಲಿಂಫೋಮಾ ಎಂಬ ರಕ್ತದ ಕ್ಯಾನ್ಸರ್ ಗೆ ತುತ್ತಾಗಿದ್ದ.

ಈ ಹಿಂದೆ ಇಂತಹುದೇ ಚಿಕಿತ್ಸೆಗೊಳಗಾಗಿ  ಜರ್ಮನಿಯಲ್ಲಿ ಚಿಕಿತ್ಸೆ ಪಡೆದಿದ್ದ ಅಮೆರಿಕನ್ ವ್ಯಕ್ತಿ ತಿಮೊತಿ ಬ್ರೌನ್ ಎಂಬವರನ್ನು 2007ರಲ್ಲಿ ಏಡ್ಸ್ ಮುಕ್ತ ಎಂದು ಘೋಷಿಸಲಾಗಿತ್ತು. ಆತ ನಂತರ ಮತ್ತೆ ಅಮೆರಿಕಾಗೆ ತೆರಳಿದ್ದು ಈಗಲೂ ಆತ ಎಚ್ ಐವಿ ಮುಕ್ತ ಎಂದು ಹೇಳಲಾಗಿದೆ. 2016ರಲ್ಲಿ ಆತ ಕ್ಯಾನ್ಸರ್ ಕಾಯಿಲೆಯಿಂದ ತೀರಾ ಅಸೌಖ್ಯಕ್ಕೊಳಗಾಗಿದ್ದಾಗ ಈ  ಅಸ್ಥಿ ಮಜ್ಕೆ ಕಸಿ ನಡೆಸಲಾಗಿತ್ತು.

ಇದೇ ಮಾದರಿಯ ಚಿಕಿತ್ಸೆಯನ್ನು ಎಲ್ಲಾ ಎಚ್ ಐವಿ ಪೀಡಿತರಿಗೂ ಒದಗಿಸಬಹುದೇ ಎಂಬ ಬಗ್ಗೆ  ವೈದ್ಯರಿಗೆ ಸಂಶಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News