×
Ad

ಸಜೀಪನಡು ಗ್ರಾಮವನ್ನು ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸುವಂತೆ ಆಗ್ರಹ

Update: 2019-03-06 18:49 IST

ಬಂಟ್ವಾಳ, ಮಾ. 6: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿರುವ ಸಜೀಪನಡು ಗ್ರಾಮವನ್ನು ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಒಕ್ಕೊರಲ ಧ್ವನಿ ಮೊಳಗಿದೆ.

ಗ್ರಾಮಸ್ಥರನ್ನು ಕತ್ತಲಲ್ಲಿಟ್ಟು, ಯಾವುದೇ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸದೆ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಸಜೀಪನಡು ಗ್ರಾಮವನ್ನು ಸೇರ್ಪಡೆಗೊಳಿಸುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಜೀಪನಡು ಗ್ರಾಮ ಪಂಚಾಯತ್‍ನಲ್ಲಿ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜೀಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಹಿರಿಯರು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರ ಸಭೆಯಲ್ಲಿ ಸಜೀಪನಡು ಗ್ರಾಮವನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಗೊಳಿಸುವುದಕ್ಕೆ ಪ್ರಬಲವಾದ ಆಕ್ಷೇಪ ವ್ಯಕ್ತವಾಯಿತು.

ಧಾರ್ಮಿಕ, ಶೈಕ್ಷಣಿಕ, ವ್ಯವಹಾರಿಕವಾಗಿ ಸಜೀಪನಡು ಗ್ರಾಮಸ್ಥರು ಬಂಟ್ವಾಳ ತಾಲೂಕೇ ಅನುಕೂಲಕರವಾಗಿದೆ. ಅಲ್ಲದೆ, ಇದನ್ನು ನೆಚ್ಚಿಕೊಂಡಿರುವ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಈ ಗ್ರಾಮವನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸರ್ವಾನುಮತದ ನಿರ್ಣಯವನ್ನು ಸಭೆ ದಾಖಲಿಸಿತು.

ಸಮಿತಿ ರಚನೆ: ಈ ಸಂಬಂಧ ಮುಂದಿನ ಹಂತದಲ್ಲಿ ಗ್ರಾಮಸ್ಥರ ಹಿತದೃಷ್ಠಿಯಿಂದ ಪಕ್ಷ, ಬೇಧ ಮರೆತು ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತಲ್ಲದೆ ಇದಕ್ಕಾಗಿ 10 ಮಂದಿಯ ಸಮಿತಿಯೊಂದನ್ನು ರಚಿಸಲಾಯಿತು. ಹಾಗೆಯೇ ಗ್ರಾಪಂನ ಮುಂದಿನ ಸಾಮಾನ್ಯಸಭೆಯಲ್ಲೂ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸರಕಾರದ ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತರಲಾಗುವುದು ಎಂದು ಸಜೀಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಭೆಗೆ ತಿಳಿಸಿದರು.

ಷಣ್ಮಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮುಳಿಂಜ ವೆಂಕಟೇಶ್ ಭಟ್, ಸಜೀಪನಡು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜೆಡಿಎಸ್ ಮುಖಂಡ ಮುಹಮ್ಮದ್ ಶಾಫಿ, ನಿವೃತ್ತ ಮುಖ್ಯೋಪಾಧ್ಯಾಯ ಆನಂದ ರೈ, ಗ್ರಾಪಂನ ಮಾಜಿ ಅಧ್ಯಕ್ಷ ಎಸ್.ಕೆ. ಮುಹಮ್ಮದ್, ನವಾಝ್ ಅವರು ಸಭೆಯಲ್ಲಿ ಉಳ್ಳಾಲ ತಾಲೂಕಿಗೆ ಸಜೀಪನಡು ಗ್ರಾಮ ಸೇರುವುದನ್ನು ವಿರೋಧಿಸಿ ಅಭಿಪ್ರಾಯವನ್ನು ಮಂಡಿಸಿದರು.

ಗ್ರಾಪಂ ಉಪಾಧ್ಯಕ್ಷೆ ಸುನೀತಾ ಶಾಂತಿ ಮೋರಸ್, ಪ್ರಮುಖರಾದ ಹರೀಶ್ ಬಂಗೇರ, ಅಲ್ತಾಫ್, ಅಬ್ದುಲ್ ರಹಿಮಾನ್, ಸಂಜೀವ ಬಂಗೇರ, ಹಾಜಬ್ಬ, ಅಬ್ದುಲ್ ಸತ್ತಾರ್, ಅಕ್ಬರ್, ಸುರೇಶ್, ಜೆರಿಮೊರಸ್ ಮೊದಲಾದವರಿದ್ದರು. 

ಯಾಕೆ ವಿರೋಧ?: ಸಜೀಪನಡುವಿನಿಂದ ಬಿ.ಸಿ.ರೋಡಿಗೆ ಕೇವಲ 8 ಕಿ.ಮೀ.ದೂರವಿದ್ದು, ಗ್ರಾಮಸ್ಥರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಲಿದೆ. ಸಜೀಪನಡು ಗ್ರಾಪಂ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟರೂ, ಇಲ್ಲಿನ ಗ್ರಾಮಸ್ಥರು ತಮ್ಮ ವ್ಯವಹಾರಕ್ಕೆ ವಿವಿಧ ಇಲಾಖೆಯಲ್ಲಾಗಬೇಕಾದ ಕೆಲಸಗಳಿಗೆ ಬಿ.ಸಿ.ರೋಡಿಗೆ ಬರುತ್ತಿದ್ದಾರೆ. ಇದೀಗ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಸಜೀಪನಡು ಗ್ರಾಮ ಸೇರಿದರೆ ಗ್ರಾಮಸ್ಥರು 18 ರಿಂದ 20 ಕಿ.ಮೀ.ದೂರ ಹೋಗಬೇಕಾಗುತ್ತದೆ. ಆಧಾರ್, ಪಡಿತರ ಕಾರ್ಡ್ ಸಹಿತ ಎಲ್ಲ ದಾಖಲೆಗಳಲ್ಲೂ ತಾಲೂಕಿನ ಬದಲಾವಣೆ ಮಾಡಬೇಕಾಗುತ್ತದೆ. ಸಜೀಪನಡು ಗ್ರಾಮಸ್ಥರಿಗೆ ಬಂಟ್ವಾಳ ತಾಳೂಕೇ ಕೇಂದ್ರ ಸ್ಥಾನವಾದರೆ ಎಲ್ಲದಕ್ಕೂ ಅನುಕೂಲಕರವಾಗುತ್ತದೆ.

ಗ್ರಾಮ ಪಂ.ನಿಂದಾಗಲೀ, ಗ್ರಾಮಸ್ಥರಿಂದ ಅಭಿಪ್ರಾಯ ಪಡೆಯದೆ ಏಕಾಏಕಿ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ತರಲಾಗಿದ್ದು, ಸಜೀಪನಡು ಗ್ರಾಮ ಸೇರ್ಪಡೆಗೆ ಯಾವುದೇ ಕಾರಣಕ್ಕು ಒಪ್ಪಲಾರೆವು ಎಂದು ಸಜೀಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಅವರು ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಕ್ಷೇತ್ರಕ್ಕೊಳಪಟ್ಟ ಪುದು ಮತ್ತು ತುಂಬೆ ಗ್ರಾಪಂ ಅನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಯಿಂದ ಕೈಬಿಟ್ಟು, ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ. ಇದೇ ರೀತಿಯಾಗಿ ಸಜೀಪನಡು ಗ್ರಾಮವನ್ನು ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ ಎಂದು ನಾಸೀರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News