ಉತ್ತರ ಪ್ರದೇಶ: ಅಧಿಕೃತ ಸಭೆಯಲ್ಲೇ ಬಿಜೆಪಿ ಸಂಸದ ಹಾಗೂ ಶಾಸಕರ ನಡುವೆ ಚಪ್ಪಲಿಯಲ್ಲಿ ಹೊಡೆದಾಟ

Update: 2019-03-06 14:05 GMT

ಲಕ್ನೋ, ಮಾ. 6 : ಅತ್ಯಂತ ಮುಜುಗರದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಇಬ್ಬರು ಜನಪ್ರತಿನಿಧಿಗಳು ಸಾರ್ವಜನಿಕ ಸಭೆಯೊಂದರಲ್ಲೇ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.  ಪಕ್ಷದ ಸಂಸದ ಶರದ್ ತ್ರಿಪಾಠಿ ಪಕ್ಷದ ಶಾಸಕ ರಾಕೇಶ್ ಸಿಂಗ್ ಅವರಿಗೆ ತನ್ನ ಪಾದರಕ್ಷೆಯಲ್ಲೇ ಎಲ್ಲರೆದುರು ಹೊಡೆದಿದ್ದಾರೆ. ತಮ್ಮ ಕ್ಷೇತ್ರದ ಯೋಜನೆಯ ಫಲಕವೊಂದರಲ್ಲಿ ಯಾರ ಹೆಸರು ಹಾಕಬೇಕು ಎಂಬ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದ ಬೆನ್ನಿಗೇ ಈ ಘಟನೆ ನಡೆದಿದೆ. 

ಸಭೆಯೊಂದರಲ್ಲಿ ಈ ಇಬ್ಬರ ನಡುವೆ ಬಿಸಿ ವಾಗ್ವಾದ ನಡೆಯುವ ದೃಶ್ಯ ವಿಡಿಯೋದಲ್ಲಿ ಕಾಣುತ್ತದೆ. ಬಳಿಕ ತಕ್ಷಣ ತ್ರಿಪಾಠಿ "ನಾನು ಎಂಪಿ" ಎನ್ನುತ್ತಾರೆ ಆಗ ರಾಕೇಶ್ ಸಿಂಗ್ "ನಾನು ಸ್ಥಳೀಯ ಶಾಸಕ" ಎಂದು ತಿರುಗೇಟು ನೀಡುತ್ತಾರೆ.  

"ನಾನು ನಿನ್ನಂತಹ ಹಲವು ಶಾಸಕರನ್ನು ಮಾಡಿದ್ದೇನೆ" ಎಂದು ತ್ರಿಪಾಠಿ ಹೇಳಿದಾಗ ರಾಕೇಶ್ ಸಿಂಗ್ ಸಿಟ್ಟಾಗಿ ತನ್ನ ಪಾದರಕ್ಷೆಯಿಂದ ಹೊಡೆಯುವುದಾಗಿ ಸನ್ನೆ ಮಾಡುತ್ತಾರೆ. ಆಗ ತ್ರಿಪಾಠಿಯೇ ತನ್ನ ಶೂ ತೆಗೆದು ಶಾಸಕನಿಗೆ ಹಲವು ಬಾರಿ ಹೊಡೆಯುತ್ತಾರೆ. ಆಗ ಸಿಂಗ್ ಕೂಡ ತಿರುಗೇಟು ನೀಡಲು ಮುಂದಾಗುತ್ತಾರೆ. ಆದರೆ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆಯುತ್ತಾರೆ. 

ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News