'ರಾಷ್ಟ್ರ ನಿರ್ಮಾಣದಲ್ಲಿ ನನ್ನ ಪಾತ್ರ' ಮತದಾರರ ಜಾಗೃತಿ ಕಾರ್ಯಕ್ರಮ

Update: 2019-03-06 14:14 GMT

ಮಂಗಳೂರು, ಮಾ.6: ದ.ಕ. ಜಿಲ್ಲೆಯ ಇತರ ತಾಲೂಕುಗಳಿಗಿಂತ ಮಂಗಳೂರು ತಾಲೂಕಿನಲ್ಲಿ ಮತ ಚಲಾಯಿಸುವ ಪ್ರಮಾಣ ಶೇ.10ರಷ್ಟು ಕಡಿಮೆ ಇದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಿ ಹಕ್ಕು ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಘಟಕದ ಅಧ್ಯಕ್ಷ ಹಾಗೂ ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ 'ರಾಷ್ಟ್ರ ನಿರ್ಮಾಣದಲ್ಲಿ ನನ್ನ ಪಾತ್ರ' ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನೆರವು ಬೇಕಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಕೇಂದ್ರ ಆರಂಭಿಸಲಾಗಿದೆ. ಮತದಾರರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರು ದೂರವಾಣಿಯ ಮೂಲಕ ಅಥವಾ ಮೊಬೈಲ್ ಮೂಲಕ 1950ಗೆ ಸಂಪರ್ಕಿಸಬಹುದು. ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ನೀಡಲಾಗುವ ಮತದಾರರ ಚೀಟಿಯನ್ನು ಈ ಬಾರಿ ಮತದಾನ ಚಲಾಯಿಸುವ ಅಧಿಕೃತ ದಾಖಲಾತಿ ಎಂದು ಪರಿಗಣಿಸಲಾಗುವುದಿಲ್ಲ, ಮತದಾರರ ಚೀಟಿ ಜೊತೆ ಮತದಾರರ ಗುರುತಿನ ಚೀಟಿ ಅಥವಾ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರ/ ರಾಜ್ಯ ಸರಕಾರ/ ಸಾರ್ವಜನಿಕ ಸಂಸ್ಥೆಯಿಂದ ಪಡೆದ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್/ ಅಂಚೆ ಕಚೇರಿ ಪಾಸ್ ಪುಸ್ತಕ , ಪಾನ್ ಕಾರ್ಡ್ , ಸ್ಮಾಟ್ ಕಾರ್ಡ್, ಜಾಬ್ ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಿದ ಆರೋಗ್ಯ ವಿಮೆ ಸ್ಮಾಟ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಅಧಿಕೃತ ಗುರುತಿನ ಚೀಟಿ, ಆಧಾರ್ ಕಾರ್ಡ್ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಹಾಜರುಪಡಿಸಿ ಮತ ಚಲಾಯಿಸಲು ಅವಕಾಶವಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, 'ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು' ಎನ್ನುವುದು ಪ್ರಸಕ್ತ ಚುನಾವಣಾ ಆಯೋಗದ ಧ್ಯೇಯವಾಕ್ಯವಾಗಿದೆ. ಪ್ರತಿಯೊಬ್ಬರು ಮತಚಲಾಯಿಸಿ ಸದೃಢ ರಾಷ್ಟ್ರ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಮತದಾರರು ಮತದಾನ ಮಾಡಲು ತಮ್ಮ ಹೆಸರು ಮತಪಟ್ಟಿಯಲ್ಲಿ ನೊಂದಣಿ ಆಗಿದೆಯಾ ಎಂದು ತಿಳಿಯಲು ತಮ್ಮ ಮೊಬೈಲ್‌ನಿಂದ KAEPIC (epic card no)  ಎಂದು ಟೈಪ್ ಮಾಡಿ ಮೊ. 9731979899ಕ್ಕೆ ಎಸ್‌ಎಂಎಸ್ ಕಳುಹಿಸಿ ಖಚಿತಪಡಿಸಿಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News