ಪ್ರಧಾನಿ ಮೋದಿ ಅಂಬಾನಿ-ಅದಾನಿಯ ನಿಯಂತ್ರಣದಲ್ಲಿ: ದಿನೇಶ್ ಗುಂಡೂರಾವ್
ಮಂಗಳೂರು, ಮಾ.6: ಪ್ರಧಾನಿ ಮಾತು ಮಾತಿಗೆ ರಾಜ್ಯ ಸಮ್ಮಿಶ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ವಿರುದ್ಧ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಬಂಡವಾಳ ಶಾಹಿಗಳಾದ ಅಂಬಾನಿ-ಅದಾನಿಯ ನಿಯಂತ್ರಣದಲ್ಲಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಬುಧವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಫೇಲ್ ಖರೀದಿಯಲ್ಲಿ ಮೋದಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅವರು ದೇಶಕ್ಕೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದು,ಅವರ ಮೇಲೆ ಪ್ರಕರಣವನ್ನೂ ದಾಖಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಬ್ಯಾಂಕ್‌ಗಳನ್ನು ಲೂಟಿಗೈದ ಅನೇಕ ಬಂಡವಾಳಶಾಹಿಗಳು ವಿದೇಶಕ್ಕೆ ಪಲಾಯನಗೈಯಲು ಮೋದಿ ಮತ್ತವರ ತಂಡವು ನೆರವು ನೀಡಿದೆ. ಕಳೆದ 5 ವರ್ಷದಲ್ಲಿ ದೇಶದ 400ರಷ್ಟು ಸೈನಿಕರು ಹುತಾತ್ಮರಾದರು. ಇದು ಮೋದಿ ಸರಕಾರದ ರಕ್ಷಣಾ ವೈಫಲ್ಯವಾದರೂ ಕೂಡ ಅದನ್ನು ಮರೆ ಮಾಚಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ನುಡಿದರು.
ಮೋದಿ ಒಬ್ಬ ಸರ್ವಾಧಿಕಾರಿ, ಕೋಮುವಾದಿ. ರಾಷ್ಟ್ರೀಯ ಮಾಧ್ಯಮಗಳೂ ಕೂಡ ಮೋದಿಯ ಪರವಾದ ಅಲೆಯನ್ನೇ ಎಬ್ಬಿಸುತ್ತಿವೆ. ಮೋದಿ ಭಯದಿಂದ ಮಾಧ್ಯಮಗಳೂ ಕೂಡ ಸತ್ಯವನ್ನು ಮರೆಮಾಚುತ್ತಿವೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.