×
Ad

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಕಟ್ಟಿಸುತ್ತೇವೆ: ಸಿ.ಎಂ. ಇಬ್ರಾಹೀಂ

Update: 2019-03-06 20:14 IST

ಮಂಗಳೂರು, ಮಾ.6: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಖಂಡಿತಾ ರಾಮಮಂದಿರ ಕಟ್ಟಿಸಿಕೊಡುತ್ತೇವೆ. ಆದರೆ, ಬಿಜೆಪಿಗರಂತೆ ಏಕಪಕ್ಷೀಯವಲ್ಲ. ಹಿಂದೂ-ಮುಸ್ಲಿಮರ ಮಧ್ಯೆ ಪರಸ್ಪರ ಚರ್ಚೆ ನಡೆಸಿ ಒಮ್ಮತದಿಂದ ರಾಮಮಂದಿರ ಕಟ್ಟಿಸುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸಿ.ಎಂ. ಇಬ್ರಾಹೀಂ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಬುಧವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಪರಿವರ್ತನಾ ಯಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶವು ಕಳೆದ 70 ವರ್ಷದಲ್ಲಿ ಮೋದಿಯಂತಹ ದುರ್ಬಲ ಪ್ರಧಾನಿಯನ್ನು ಕಂಡಿಲ್ಲ. ಮೋದಿಯಿಂದಾಗಿ ದೇಶದ ಜನರು ಭಿಕಾರಿಗಳಾಗಿದ್ದಾರೆ. ಸಂಸಾರದ ಜಂಜಾಟ ಗೊತ್ತಿಲ್ಲದ ಅವರು ದೇಶದ 30 ಕೋಟಿ ಮುಸ್ಲಿಂ ಮಹಿಳೆಯರ ತ್ರಿವಳಿ ತಲಾಖ್ ಬಗ್ಗೆ ಆಸಕ್ತಿ ವಹಿಸಿರುವುದು ವಿಪರ್ಯಾಸ ಎಂದರು.

ಆಮಂತ್ರಣವಿಲ್ಲದೆ ಕಾರ್ಯಕ್ರಮಗಳಿಗೆ ಹೋಗುವವರ ವ್ಯಕ್ತಿತ್ವ ನಾಶ ಆಗಲಿದೆ ಎಂಬ ಉಕ್ತಿ ಸಂಸ್ಕೃತದಲ್ಲಿದೆ. ಆದರೆ, ಮೋದಿಯು ನವಾಝ್ ಶರೀಫ್‌ರ ಕಾಲದಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಂದು ತನ್ನ ವ್ಯಕ್ತಿತ್ವವನ್ನೇ ನಾಶ ಮಾಡಿಕೊಂಡರು. ಮೋದಿಗೆ ಯಾರೂ ಹೆದರಬೇಕಾಗಿಲ್ಲ. ಅದರಲ್ಲೂ ಮುಸ್ಲಿಮರು ಭಯಪಡಬೇಕಾಗಿಲ್ಲ. ದುಷ್ಟ ರಾಜ ನಮ್ರೂದ್‌ಗೆ ಹೆದರದ ಮುಸ್ಲಿಮರು ಮೋದಿಗೆ ಹೆದರುವುದುಂಟೇ? ಎಂದು ಸಿಎಂ ಇಬ್ರಾಹೀಂ ವ್ಯಂಗ್ಯವಾಡಿದರು.

ದ.ಕ.ಜಿಲ್ಲೆಯ ಹೆಮ್ಮೆಯ ವಿಜಯಾ ಬ್ಯಾಂಕ್‌ಗೆ ಮೋದಿ ಬಾಗಿಲು ಜಡಿಯುತ್ತಿದ್ದರೂ ಇಲ್ಲಿನ ಸಂಸದ ನಳಿನ್ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮೌನವಾಗಿರುವುದು ಜಿಲ್ಲೆಯ ಜನತೆಗೆ ಮಾಡಿರುವ ಅವಮಾನ ಎಂದು ಇಬ್ರಾಹೀಂ ನುಡಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ವಿಜಯ ಕುಮಾರ್ ಶೆಟ್ಟಿ, ಮೊಯ್ದಿನ್ ಬಾವಾ, ವಸಂತ ಬಂಗೇರಾ, ಶಕುಂತಳಾ ಶೆಟ್ಟಿ, ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥನ್, ಕೆಪಿಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಡಾ.ರಾಜೇಂದ್ರ ಕುಮಾರ್, ಮೇಯರ್ ಭಾಸ್ಕರ ಕೆ., ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಪಕ್ಷದ ಮುಖಂಡರಾದ ಜಿ.ಎ.ಬಾವಾ, ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಕವಿತಾ ಸನಿಲ್, ಕೃಪಾ ಆಳ್ವ, ಮಮತಾ ಗಟ್ಟಿ, ಮಿಥುನ್ ರೈ, ಕಳ್ಳಿಗೆ ತಾರನಾಥ ಶೆಟ್ಟಿ, ಟಿ.ಎಂ.ಶಹೀದ್, ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಎಂ.ಎಸ್.ಮುಹಮ್ಮದ್, ದೇವಿಪ್ರಸಾದ್ ಶೆಟ್ಟಿ, ಮಾಧವ ಮಾವ, ಧನಂಜಯ ಅಡ್ಪಂಗಾಯ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹಾಗೂ ಜಿಪಂ ಸದಸ್ಯ ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.

ಕುಸಿಯುವ ಭೀತಿಯಿಂದ ವೇದಿಕೆಯಿಂದ ಇಳಿದ ನಾಯಕರು
ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಸಾಕಷ್ಟು ಸಂಖ್ಯೆಯ ಗಣ್ಯರು ಕೂಡ ವೇದಿಕೆಯ ಮೇಲೇರಿದ್ದರು. ಸ್ವಲ್ಪ ಸಮಯದ ಬಳಿಕ ವೇದಿಕೆಯ ಹಿಂದಿನ ಭಾಗವು ಒತ್ತಡ ತಾಳಲಾರದೆ ಅಲುಗಾಡಲು ತೊಡಗಿತು. ತಕ್ಷಣ ಸಮಯಪ್ರಜ್ಞೆ ಮೆರೆದ ಸಂಘಟಕರು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕೆಲವು ನಾಯಕರನ್ನು ಕೆಳಗೆ ಇಳಿಯಲು ಸೂಚಿಸಿದರು. ಅದರಂತೆ ಕುಸಿಯುವ ಭೀತಿಗೊಳಗಾದ ನಾಯಕರು ಕೆಳಗಿಳಿದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News