ಟ್ಯೂಶನ್‌ಗೆ ತೆರಳಿ ನಾಪತ್ತೆಯಾಗಿದ್ದ ಕೃಷ್ಣಾಪುರದ ಬಾಲಕರು ಪತ್ತೆ
ಮಂಗಳೂರು, ಮಾ.6: ಟ್ಯೂಶನ್‌ಗೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಗೋವಾದಲ್ಲಿ ಬುಧವಾರ ಪತ್ತೆಯಾಗಿದ್ದು, ಗೋವಾ ಪೊಲೀಸರನ್ನು ಮಂಗಳೂರು ಪೊಲೀಸರು ಸಂಪರ್ಕಿಸಿದ್ದಾರೆ.
ಕೃಷ್ಣಾಪುರ ನಿವಾಸಿಗಳಾದ ಅಬ್ದುರ್ರಹ್ಮಾನ್- ಜಮೀಲಾ ದಂಪತಿಯ ಪುತ್ರ ತನ್ವೀರ್ ಹಾಗೂ ಆಬಿದ್-ಕಮರು ದಂಪತಿಯ ಪುತ್ರ ತನ್ವೀಝ್ ಪತ್ತೆಯಾದವರು.
ಘಟನೆ ವಿವರ: ಪ್ರೌಢಶಾಲಾ ವಿದ್ಯಾರ್ಥಿಗಳಾದ ತನ್ವೀರ್, ತನ್ವೀಝ್ ಪ್ರತಿದಿನ ಟ್ಯೂಶನ್ ಗೆ ತೆರಳಿ ಅಲ್ಲಿಂದ ಮದ್ರಸಕ್ಕೆ ಹೋಗಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದರು. ಆದರೆ ಮಾ.5ರಂದು ಸಂಜೆ ಟ್ಯೂಶನ್‌ಗೆ ತೆರಳಿದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಮಂಗಳವಾರ ಮದ್ರಸಕ್ಕೆ ರಜೆ ಇತ್ತೆನ್ನಲಾಗಿದೆ. ಈ ನಡುವೆ ತನ್ವೀರ್ ಮತ್ತು ತನ್ವೀಝ್ ಮಂಗಳವಾರ ಸಂಜೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರೆನ್ನಲಾಗಿತ್ತು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಗೋವಾದ ಮಡಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ. ಪೋಷಕರ ಜೊತೆ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಗೋವಾಕ್ಕೆ ಕಳುಹಿಸಿಕೊಡಲಾಗಿದೆ. ಮಕ್ಕಳನ್ನು ಕರೆದು ತರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸುರತ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.