×
Ad

ಕರಾವಳಿಯಲ್ಲಿ ಸರ್ವಧರ್ಮಿಯರಿಂದ ಸಹಬಾಳ್ವೆ ಬದುಕು: ಸೊರಕೆ

Update: 2019-03-06 21:00 IST

ಉಡುಪಿ, ಮಾ.6: ಕರಾವಳಿ ಜಿಲ್ಲೆಯಲ್ಲಿ ಸರ್ವಧರ್ಮದವರು ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದಾರೆ. ಇಲ್ಲಿನ ಜನಜೀವನವೇ ಸೌಹಾರ್ದ ಮಯವಾಗಿದೆ. ಈ ಸಂದೇಶವನ್ನು ನಾವು ಸಮಾಜಕ್ಕೆ ಸಾರುವುದು ಇಂದಿನ ಅತಿ ಅಗತ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಸಹಬಾಳ್ವೆ ಉಡುಪಿ ಜಿಲ್ಲೆ ಇದರ ವತಿಯಿಂದ ಮಾ.17ರಂದು ಉಡುಪಿ ಯಲ್ಲಿ ಹಮ್ಮಿಕೊಳ್ಳಲಾದ 'ಸರ್ವಜನೋತ್ಸವ ಸಮಾವೇಶ'ದ ಕಚೇರಿಯನ್ನು ಬುಧವಾರ ಉಡುಪಿ ತೆಂಕಪೇಟೆಯ ಸಿತಾರ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಸಂಕುಚಿತ ಮನೋಭಾವದ ಹಾಗೂ ಕೋಮುಗಲಭೆಗಳ ಪ್ರಯೋಗ ಶಾಲೆಯನ್ನಾಗಿಸಲಾದ ಕರಾವಳಿ ಜಿಲ್ಲೆಯಲ್ಲಿ ಇಂದು ಪರಸ್ಪರ ಅಪನಂಬಿಕೆಯ ವಾತಾವರಣ ನಿರ್ಮಿಸಲಾಗಿದೆ. ಇದರಿಂದ ನಾವೆಲ್ಲ ಹೊರಬಂದು ಎಲ್ಲ ಧರ್ಮದವರು ಶಾಂತಿ ಸೌಹಾರ್ದತೆಯಿಂದ ಒಂದಾಗಿ ಬದುಕು ನಡೆಸುತ್ತಿದ್ದೇವೆ ಎಂಬ ಸಂದೇಶವನ್ನು ಸಾರಬೇಕಾಗಿದೆ ಎಂದರು.

ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಒಂದು ವರ್ಗದವರು ನಮ್ಮ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಯುವಕರಿಗೆ ಸತ್ಯದ ಅರಿವು ಮೂಡಿಸಿ ಶಾಂತಿ ಸೌಹಾರ್ದತೆಯ ವಾತಾವರಣವನ್ನುನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.

ಹಿರಿಯ ಚಿಂತಕ ಜಿ.ರಾಜಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವೌಲಾ, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಕರವೇ ಜಿಲ್ಲಾ ಅಧ್ಯಕ್ಷ ಅನ್ಸಾರ್ ಅಹ್ಮದ್, ಮಾಜಿ ನಗರಸಭಾ ಸದಸ್ಯ ಗಣೇಶ್ ನೆರ್ಗಿ, ಭಾಸ್ಕರ ರಾವ್ ಕಿದಿಯೂರು, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿರಿಲ್ ಮಥಾಯಸ್, ರೋಶನಿ ಒಲಿವೇರಾ, ಕ್ರೈಸ್ತ ಸಂಘಟನೆಗಳ ಒಕ್ಕೂಟದ ಪ್ರಶಾಂತ್ ಜತ್ತನ್ನ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

ಸರ್ವಜನೋತ್ಸವದ ಸಂಚಾಲಕ ಅಮೃತ್ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ ವಂದಿಸಿದರು.

25ಸಾವಿರ ಮಂದಿಯ ನಿರೀಕ್ಷೆ: ಸಹಬಾಳ್ವೆ ಸಂಘಟನೆಯ ವತಿಯಿಂದ ಉಡುಪಿಯ ರಾಯಲ್ ಗಾರ್ಡನ್ ನಲ್ಲಿ ನಡೆಯಲಿರುವ ಸರ್ವಜನೋತ್ಸವ ಸಮಾವೇಶದಲ್ಲಿ ಸುಮಾರು 20-25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸಂಚಾಲಕ ಅಮೃತ್ ಶೆಣೈ ತಿಳಿಸಿದರು.

ದೇಶದಲ್ಲಿ ನೆಮ್ಮದಿ ಹಾಗೂ ಶಾಂತಿಯ ವಾತಾವರಣ ನಿರ್ಮಿಸುವ ಮತ್ತು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲ ಜಾತಿ, ಧರ್ಮದವರು ಸೇರಿ ಈ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರಲ್ಲಿ ಸಿಪಿಎಂ ಮುಖಂಡ ಸೀತಾರಾಮ ಯೆಚೂರಿ, ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News