×
Ad

ಲೋಕಸಭಾ ಚುನಾವಣೆ: ಉಡುಪಿಯಲ್ಲಿ ಕಾಂಗ್ರೆಸ್‌ನಿಂದ ನಾಲ್ವರು ಆಕಾಂಕ್ಷಿಗಳು

Update: 2019-03-06 21:21 IST

ಉಡುಪಿ, ಮಾ.6:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ನಾಲ್ವರು ಆಕಾಂಕ್ಷಿಗಳ ಹೆಸರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಇಂದು ಬಹಿರಂಗಪಡಿಸಿದರು.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಕೊನೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ತಿಳಿಸಿದ ಸಚಿವೆ, ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ರಾಜ್ಯ ಎನ್‌ಆರ್‌ಐ ಸೆಲ್‌ನ ಅಧ್ಯಕ್ಷೆ ಆರತಿ ಕೃಷ್ಣ ಹಾಗೂ ಚಿಕ್ಕಮಗಲೂರು ಡಿಸಿಸಿ ಅಧ್ಯಕ್ಷ ಡಾ.ವಿಜಯ ಕುಮಾರ್ ಈ ನಾಲ್ಕು ಮಂದಿ ಸ್ಪರ್ಧಾಕಾಂಕ್ಷಿಗಳ ರೇಸ್‌ನಲ್ಲಿದ್ದಾರೆ. ಅಂತಿಮವಾಗಿ ಯಾರು ಸ್ಪರ್ಧಿಸಬೇಕೆನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ಉಡುಪಿಯ ಬಿಜೆಪಿ ಪಕ್ಷದಲ್ಲಿರುವ ಗೊಂದಲ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಯಮಾಲ, ಅವರ ಜಗಳದಿಂದ ನಾವು ಲಾಭ ಪಡೆಯಬೇಕಿಲ್ಲ. ಬಿಜೆಪಿ ಪಕ್ಷ ಮಾಡಿರುವ, ಮಾಡುತ್ತಿರುವ ತಪ್ಪೇ ಕಾಂಗ್ರೆಸ್ಸಿಗೆ ಈ ಬಾರಿ ಚುನಾವಣೆಯಲ್ಲಿ ಲಾಭ ತರಲಿದೆ ಎಂದರು.

ಎಂಡೋಪೀಡಿತರ ಪುನರ್‌ಸರ್ವೇ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂತ್ರಸ್ತರು ಸರಕಾರದ ಪರಿಹಾರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್ ಸರ್ವೇ ನಡೆಸಲಾಗುವುದು. ಕುಂದಾಪುರದಲ್ಲಿ ಎಂಡೋ ಪೀಡಿತರ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಅವರು ಹೇಳಿದರು.

ಸುಮಾರು 4 ದಶಕಗಳ ಹಿಂದೆ ಕರಾವಳಿಯುದ್ದಕ್ಕೂ ಎಂಡೋಸಲ್ಫಾನ್ ರಸಾಯನಿಕವನ್ನು ಸಿಂಪಡಿಸಲಾಗಿದೆ. ನೆಲ, ಜಲದಲ್ಲಿ ಎಂಡೋಸಲ್ಫಾನ್‌ನ ವಿಷಕಾರಿ ಅಂಶಗಳು ಈಗಲೂ ಇದ್ದು, ಇದರಿಂದ ಈಗಲೂ ಸಿಂಪಡಣೆಯಾದ ಪ್ರದೇಶದ ಆಸುಪಾಸಿನ ಜನರು ಅಂಗವೈಕಲ್ಯಹಾಗೂ ಇತರ ಕಾಯಿಲೆಗಳಿಂದ ನರಳುತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞ ಪರಿಣಿತರನ್ನು ಒಳಗೊಂಡ ತಂಡದಿಂದ ಸರ್ವೇ ನಡೆಸಿ, ಸಂತ್ರಸ್ತರ ಪರಿಹಾರಕ್ಕಾಗಿ ಪ್ಯಾಕೇಜ್ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾದ 8 ದಿಬ್ಬಗಳಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ನಾನ್ ಸಿಆರ್‌ಝಡ್ ವ್ಯಾಪ್ತಿಯ 30 ದಿಬ್ಬಗಳ ಪೈಕಿ 7 ದಿಬ್ಬಗಳ ಮರಳನ್ನು ಸರಕಾರಿ ಕಾಮಗಾರಿಗೆ ಬಳಸಲಾಗುತ್ತಿದೆ. ಉಳಿದ 23 ದಿಬ್ಬಗಳಲ್ಲಿ ಮರಳುಗಾರಿಕೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸುವರು ಎಂದರು.

ದಮನಿತ ಮಹಿಳೆಯರ ಕೋಶ:  ದಮನಿತ ಮಹಿಳೆಯರ ಅಭಿವೃದ್ಧಿಗಾಗಿ ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿ ದಮನಿತ ಮಹಿಳೆಯರ ಪುನರ್ವಸತಿ ಕೋಶ ಆರಂಭಿಸಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಈಗಾಗಲೇ ಇವು ಕಾರ್ಯಾರಂಭ ಮಾಡಿವೆ. ಇದಕ್ಕಾಗಿ 11.5 ಕೋ. ರೂ. ತೆಗೆದಿರಿಸಲಾಗಿದೆ. ರಾಜ್ಯದಲ್ಲಿ ಸುಮಾರು 1 ಲಕ್ಷ ಮಂದಿ ದಮನಿತ ಮಹಿಳೆಯರಿದ್ದು, ಇವರು ಸ್ವಾವಲಂಬಿಗಳಾಗಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದು ಸಚಿವೆ ತಿಳಿಸಿದರು.

ಮೀನುಗಾರರ ನಾಪತ್ತೆ ಪ್ರಕರಣ: ದುಬೈನಲ್ಲಿ ಮೀನುಗಾರರ ಪತ್ತೆಯಾದ ಬಗ್ಗೆ ಬಂದ ಸುದ್ದಿಗೆ ಸ್ಪಷ್ಟೀಕರಣ ನೀಡಿದ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 5-6 ತಂಡಗಳನ್ನು ರಚಿಸಲಾಗಿದ್ದು, ಯಾವುದೇ ಮಾಹಿತಿ ಲಭ್ಯವಾದರೆ ತಕ್ಷಣ ಈ ಬಗ್ಗೆ ಕಾರ್ಯಪ್ರವೃತ್ತವಾಗುತ್ತೇವೆ. ತನಿಖೆ ಮುಂದುವರಿದಿದೆ. ಕಳೆದ ವಾರ ನಾಪತ್ತೆಯಾದ ಮೀನುಗಾರ ಕುಟುಂಬಸ್ಥರು ನೀಡಿದ ಸೂಚನೆಯಂತೆ ರತ್ನಗಿರಿಯಲ್ಲಿ ಅವರೊಂದಿಗೆ ತೆರಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News