ಇಸ್ರೇಲ್‌ನಲ್ಲಿ ವಿಪಕ್ಷಗಳು ಸೇನೆಯನ್ನು ಅವಮಾನಿಸುವುದಿಲ್ಲ: ವಿ.ಕೆ ಸಿಂಗ್
ಹೊಸದಿಲ್ಲಿ, ಮಾ.6: ಉಗ್ರರನ್ನು ದಮನಿಸುವಲ್ಲಿ ಭಾರತ ಇಸ್ರೇಲನ್ನು ಅನುಸರಿಸಬೇಕು ಎಂದು ಜನರು ಬಯಸುತ್ತಾರೆ. ಆದರೆ ಇಸ್ರೇಲ್‌ನಲ್ಲಿ ವಿಪಕ್ಷಗಳು ಭಾರತದಂತೆ ಸೇನೆಯು ಯಾವುದೇ ದಾಳಿ ನಡೆಸಿದಾಗ ಪ್ರಶ್ನಿಸುವುದಿಲ್ಲ ಮತ್ತು ಅವಮಾನಿಸುವುದಿಲ್ಲ ಎಂದು ಕೇಂದ್ರ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಸಿಂಗ್, ಇಸ್ರೇಲ್ ಸೇನೆ ಆಪರೇಶನ್ ಮ್ಯೂನಿಚ್‌ನಂತ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಅಲ್ಲಿನ ವಿಪಕ್ಷಗಳು ಸೇನೆಯನ್ನು ಪ್ರಶ್ನಿಸುವ ಅಥವಾ ಅವಮಾನಿಸುವ ಕೆಲಸ ಮಾಡಲಿಲ್ಲ ಎಂದು ಹೇಳುತ್ತಾ, ಸರಕಾರದ ಟೀಕಾಕಾರರಾದ ವಿಪಕ್ಷಗಳು, ವಿದ್ಯಾರ್ಥಿ ನಾಯಕರು, ಹೋರಾಟಗಾರರು ಮತ್ತು ಮಾಧ್ಯಮದ ಮೇಲೆ ಹರಿಹಾಯ್ದರು. ಭಾರತದೊಳಗೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್‌ನ ಅಗತ್ಯವಿದೆ ಎಂದು ತಿಳಿಸಿದ ಸಿಂಗ್ ಅದು ನಡೆಯದಿದ್ದರೆ ಕಳ್ಳರು ದೋಚಲು ಸಿದ್ಧವಾಗಿದ್ದಾರೆ ಎಂದು ಎಚ್ಚರಿಸಿದ್ದಾರೆ. ವಿದ್ಯಾರ್ಥಿ ನಾಯಕರನ್ನು ಜಿಗಣೆಗೆ ಹೋಲಿಸಿದ ಮಾಜಿ ಸೇನಾ ಮುಖ್ಯಸ್ಥ ಉಗ್ರರನ್ನು ತೀವ್ರವಾದಿಗಳೆಂದು ಸಂಬೋಧಿಸಿದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಘಟನೆಗಳು ಇಸ್ರೇಲ್‌ನಲ್ಲಿ ನಡೆಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಬಾಲಕೋಟ್‌ನಲ್ಲಿ ಭಾರತೀಯ ವಾಯುಪಡೆ ನಡೆಸಿದ ದಾಳಿಯ ನಂತರ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ನಡೆಯುತ್ತಿರುವ ಕೆಸರೆರಚಾಟದ ಮಧ್ಯೆ ಸಿಂಗ್ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಗೆಡವಿದ್ದಾರೆ. ಭಾರತ ಯಾಕೆ ಇಸ್ರೇಲ್ ಆಗಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯಡಿ ಬರೆದಿರುವ ಪೋಸ್ಟ್‌ನಲ್ಲಿ ವಿ.ಕೆ. ಸಿಂಗ್ ಇದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಯಾಕೆಂದರೆ ಇಸ್ರೇಲ್‌ನಲ್ಲಿ ದೇಶವನ್ನು ಒಡೆಯಲು ಬೆಂಬಲ ಸೂಚಿಸಿ ಘೋಷಣೆಗಳನ್ನು ಕೂಗಲು ಯುವಕರಿಗೆ ಅವಕಾಶ ನೀಡುವ ಜೆಎನ್‌ಯುನಂತ ವಿಶ್ವವಿದ್ಯಾನಿಲಯಗಳಿಲ್ಲ. ಅಲ್ಲಿನ ಉಗ್ರರಿಗಾಗಿ ನ್ಯಾಯಾಲಯವನ್ನು ರಾತ್ರಿ ಎರಡು ಗಂಟೆಗೆ ತೆರೆಯಲಾಗುವುದಿಲ್ಲ ಅಥವಾ ಪತ್ರಕರ್ತರು ಉಗ್ರರ ಮಾನವ ಹಕ್ಕುಗಳಿಗಾಗಿ ಬೊಬ್ಬೆ ಹೊಡೆಯುವುದಿಲ್ಲ. ಇಸ್ರೇಲ್‌ನಲ್ಲಿ ದೇಶವೇ ಅತ್ಯುನ್ನತವಾದುದು, ಧರ್ಮ ಅಥವಾ ಜಾತಿಯಲ್ಲ. ಅಲ್ಲಿ ಜಾಟ್, ಗುಜ್ಜರ್ ಅಥವಾ ಮರಾಠ ಎಂದು ಜನರು ಬೀದಿಗಿಳಿದು ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುವುದಿಲ್ಲ ಎಂದು ವಿ.ಕೆ ಸಿಂಗ್ ತಿಳಿಸಿದ್ದಾರೆ.