×
Ad

ಬಾಲಕೋಟ್ ದಾಳಿಯ ಸ್ಥಳದಲ್ಲಿದ್ದ ಕಟ್ಟಡಕ್ಕೆ ಹಾನಿಯಾಗಿಲ್ಲ: ಉಪಗ್ರಹ ಚಿತ್ರಗಳಿಂದ ಬಹಿರಂಗ

Update: 2019-03-06 21:50 IST

ಹೊಸದಿಲ್ಲಿ,ಮಾ.6: ಉತ್ತರ ಪಾಕಿಸ್ತಾನದ ಬಾಲಕೋಟ್ ‌ನಲ್ಲಿ ಜೈಶೆ ಮುಹಮ್ಮದ್ ಸಂಘಟನೆಯ ಉಗ್ರಗಾಮಿ ಶಿಬಿರದ ಮೇಲೆ ಭಾರತೀಯ ವಾಯುಪಡೆಯ ವಿಮಾನಗಳು ದಾಳಿ ನಡೆಸಿರುವುದಾಗಿ ಭಾರತ ಘೋಷಿಸಿದ ಆರು ದಿನಗಳ ಬಳಿಕ ಆ ಜಾಗದಲ್ಲಿರುವ ಮದ್ರಸ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲವೆಂಬುದನ್ನು ತೋರಿಸುವ ಛಾಯಾಚಿತ್ರಗಳನ್ನು ರಾಯ್ಟರ್ಸ್‌ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ.

ಮದ್ರಸವೆಂದು ಹೇಳಲಾಗುತ್ತಿದ್ದ ಕಟ್ಟಡದಲ್ಲಿ ಭಾರೀ ಸಂಖ್ಯೆಯ ಜೈಶೆ ಉಗ್ರರು ಆಶ್ರಯ ಪಡೆದುಕೊಂಡಿದ್ದರೆಂದು ಭಾರತ ಹೇಳಿಕೊಂಡಿತ್ತು. ಆದರೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಮೂಲದ ಖಾಸಗಿ ಉಪಗ್ರಹ ನಿರ್ವಾಹಕ ಸಂಸ್ಥೆಯಾದ ಪ್ಲಾನೆಟ್‌ಲ್ಯಾಬ್ಸ್ ಐಎನ್‌ಸಿ ಸಂಸ್ಥೆಯು ಮಾರ್ಚ್ 4ರಂದು ತೆಗೆದು ಛಾಯಾಚಿತ್ರದಲ್ಲಿ ಮದ್ರಸ ಸಂಕೀರ್ಣಕ್ಕೆ ಸೇರಿದ ಕನಿಷ್ಠ ಆರು ಕಟ್ಟಡಗಳು ಸುರಕ್ಷಿತವಾದ ಸ್ಥಿತಿಯಲ್ಲಿರುವುದು ಸ್ಪಷ್ಟವಾಗಿ ಕಂಡುಬಂದಿದೆಯೆಂದು ರಾಯ್ಟರ್ಸ್‌ ಹೇಳಿಕೊಂಡಿದೆ.

ಈ ಕಟ್ಟಡಗಳ ಛಾವಣಿ, ಗೋಡೆಗಳಲ್ಲಿ ಯಾವುದೇ ಬಿರುಕುಗಳು ಮೂಡಿರುವುದು ಕೂಡಾ ಚಿತ್ರದಲ್ಲಿ ಕಂಡುಬಂದಿಲ್ಲ. ಆಸುಪಾಸಿನಲ್ಲಿರುವ ಮರಗಳೂ ಕೂಡಾ ಹಾನಿಯಾಗಿರುವ ಲಕ್ಷಣಗಳು ಕಂಡುಬರುತ್ತಿಲ್ಲವೆಂದು ಅದು ಹೇಳಿದೆ.

 ಹೈರೆಸೆಲ್ಯೂಶನ್‌ನಲ್ಲಿ ತೆಗೆಯಲಾದ ಈ ಉಪಗ್ರಹ ಛಾಯಾಚಿತ್ರಗಳನ್ನು ರಾಯ್ಟರ್ಸ್‌ ಬಿಡುಗಡೆಗೊಳಿಸಿದೆ. ಭಾರತೀಯ ವಾಯುಪಡೆ ದಾಳಿ ನಡೆಸಿದೆಯೆಂದು ಹೇಳಿದ ಸ್ಥಳದಲ್ಲಿದ್ದ ಕಟ್ಟಡವು ಸಂಪೂರ್ಣ ಸುರಕ್ಷಿತವಾಗಿರುವುದು ಈ ಚಿತ್ರದಲ್ಲಿ ಕಂಡುಬಂದಿದೆ.

ಈ ಹೈರೆಸೆಲ್ಯೂಶನ್‌ನ ಚಿತ್ರಗಳು ಯಾವುದೇ ಬಾಂಬ್ ಹಾನಿಯುಂಟಾಗಿರುವುದನ್ನು ತೋರಿಸಿಕೊಡುತ್ತಿಲ್ಲವೆಂದು ಪೂರ್ವ ಏಶ್ಯ ಶಸ್ತ್ರಾಸ್ತ್ರ ಪ್ರಸರಣ ವಿರೋಧಿ ಯೋಜನೆಯ ನಿರ್ದೇಶಕರಾದ ಜೆಫ್ರಿ ಲೆವಿಸ್ ತಿಳಿಸಿದ್ದಾರೆ

ಫೆಬ್ರವರಿ 26ರ ನಸುಕಿನಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ಪ್ರಾಂತದ ಬಾಲಕೋಟ್‌ನ ಜಾಬಾ ಗ್ರಾಮದ ಬಳಿ ಜೈಶೆ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು ಭಾರೀ ಸಂಖ್ಯೆಯ ಉಗ್ರರನ್ನು ಹತ್ಯೆಗೈದಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News