ಪ್ರೇಮ ವೈಫಲ್ಯ ನೆಪದಲ್ಲಿ ನೇತ್ರಾವತಿ ಸೇತುವೆಯಿಂದ ಹಾರಿದ ಯುವಕ

Update: 2019-03-06 16:57 GMT

ಮಂಗಳೂರು, ಮಾ. 6: ಪ್ರೇಮ ವೈಫಲ್ಯ ನೆಪದಲ್ಲಿ ಉಳ್ಳಾಲ ನೇತ್ರಾವತಿ ಸೇತುವೆ ಮೇಲ್ಭಾಗದಿಂದ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೇರಳದ ಮಂಜೇಶ್ವರ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿ ಪ್ರಾಣಾಪಾಯದಿಂದ ಪಾರಾದ ಯುವಕ. ಈಜು ಬಲ್ಲವನಾಗಿದ್ದರಿಂದ ಯುವಕ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ. ಪ್ರೇಮ ವೈಫಲ್ಯ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ತನ್ನ ಸ್ನೇಹಿತನ ಜತೆಗೆ ತ್ರಿಚಕ್ರ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ನೌಫಲ್ ನೇತ್ರಾವತಿ ಸೇತುವೆಯ ಮಧ್ಯೆ ತಲುಪಿದಾಗ ತನಗೆ ವಾಂತಿ ಬರುತ್ತಿದೆ ಎಂದು ಸ್ನೇಹಿತನಿಗೆ ಹೇಳಿ ಟೆಂಪೊವನ್ನು ನಿಲ್ಲಿಸಿದ್ದನು. ಬಳಿಕ ಸೇತುವೆಯ ಬದಿಗೆ ಹೋದ ನೌಫಾಲ್ ವಾಂತಿ ಮಾಡುವ ನೆಪದಲ್ಲಿ ಬಗ್ಗಿ ನೇತ್ರಾವತಿ ನದಿಗೆ ಹಾರಿದ್ದನು.

ನದಿ ನೀರಿಗೆ ಬಿದ್ದ ಆತ ನೀರಿನಿಂದ ಮೇಲಕ್ಕೆ ಬಂದ ತಕ್ಷಣ ಈಜಿ ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಪಿಲ್ಲರ್‌ನ ಸ್ಲ್ಯಾಬ್ ಮೇಲೆ ಕುಳಿತಿದ್ದನು. ಇದನ್ನು ವೀಕ್ಷಿಸಲು ಸೇತುವೆಯ ಮೇಲೆ ಕುತೂಹಲಿಗರ ದಂಡೇ ಸೇರಿತ್ತು.

ಮಂಗಳೂರು ನಗರ ದಕ್ಷಿಣ ಟ್ರಾಫಿಕ್ ಇನ್‌ಸ್ಪೆಕ್ಟರ್ ಗುರುದತ್ತ ಕಾಮತ್ ಸ್ಥಳದಲ್ಲಿದ್ದು, ಅವರು ಸಾರ್ವಜನಿಕರ ಸಹಕಾರದಿಂದ ನೌಫಲ್‌ನನ್ನು ಮೇಲ್ಗಡೆ ಕರೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

ಕಂಕನಾಡಿ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ಮತ್ತು ಸಿಬ್ಬಂದಿ ಆತನ ವಿಚಾರಣೆ ನಡೆಸಿದರು. ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News