ಬೈಕ್ ಸವಾರರ ಮೇಲೆ ಉರುಳಿಬಿದ್ದ ಮರ: ಇಬ್ಬರಿಗೆ ಗಾಯ; ಬೈಕ್ ಜಖಂ
ಮಂಗಳೂರು, ಮಾ.6: ದ್ವಿಚಕ್ರ ವಾಹನ ಸವಾರರ ಮೇಲೆ ಹಳೆಯದಾದ ಮರವೊಂದು ಉರುಳಿ ಬಿದ್ದು ಸವಾರರು ಗಾಯಗೊಂಡಿರುವ ಘಟನೆ ನಗರದ ಲಾಲ್‌ಬಾಗ್ ಬಳಿ ಬುಧವಾರ ಸಂಭವಿಸಿದೆ. ಬಿಜೈ ನಿವಾಸಿಗಳಾದ ಹೈದರ್ ಮತ್ತು ನಿಹಾಲ್ ಗಾಯಾಳುಗಳು.
ಘಟನೆ ವಿವರ: ಲಾಲ್‌ಬಾಗ್ ಹಿಂದಿ ಪ್ರಚಾರ ಸಮಿತಿ ಬಳಿಯ ರಸ್ತೆಯಲ್ಲಿ ಬಿಜೈಯ ಹೈದರ್ ಮತ್ತು ನಿಹಾಲ್ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಸಂಚಾರ ನಿರತರಾಗಿರುವಾಗಲೇ ಮರ ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ಇಬ್ಬರೂ ರಸ್ತೆಗುರುಳಿದ್ದರು. ಸವಾರ ನಿಹಾಲ್ ಅವರ ಮುಖದ ಭಾಗಕ್ಕೆ ಏಟಾಗಿದ್ದು, ಹಲ್ಲು ಉದುರಿವೆ. ಸಹ ಸವಾರ ಹೈದರ್ ಅವರ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಕೊಡಿಯಾಲ್‌ಬೈಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಒದಗಿಸಲಾಗಿದೆ. ನಿಹಾಲ್ ಅವರು ಹೆಚ್ಚಿನ ಚಿಕಿತ್ಸೆ ಪಡೆದು ರಾತ್ರಿ ವೇಳೆಗೆ ಬಿಡುಗಡೆ ಹೊಂದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದ್ವಿಚಕ್ರ ವಾಹನಕ್ಕೆ ತೀವ್ರ ಜಖಂ ಆಗಿದೆ.
ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದ ಮರ ಸಾಧಾರಣ ಒಣಗಿದ್ದು, ಕಳೆದ ಹಲವು ಸಮಯದಿಂದ ಅದು ಹಾಗೆಯೇ ಇತ್ತು. ಮರ ಕಡಿಯುವ ವಿಚಾರದಲ್ಲಿ ಪರಿಸರವಾದಿಗಳಿಂದ ಆಕ್ಷೇಪ ಇದ್ದ ಕಾರಣ ಈ ಮರವನ್ನು ಹಾಗೆಯೇ ಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸರು ಈ ಬಗ್ಗೆ ಕ್ರಮ ಜರಗಿಸಿದ್ದಾರೆ.