ಮತದಾರ ಜಾಗೃತಿ ಕಾರ್ಯಕ್ರಮ
Update: 2019-03-06 22:38 IST
ಮಂಗಳೂರು, ಮಾ.6: ಮಂಗಳೂರಿನಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಿದ್ದು, ಎಲ್ಲರೂ ಮತದಾನ ಮಾಡುವ ಅಗತ್ಯವಿದೆ. ಜನಜಾಗೃತಿಯಿಂದ ಮತದಾನ ಹೆಚ್ಚಲಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್ ಹೇಳಿದರು.
ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳೂರು ತಾಲೂಕು ಪಂಚಾಯತ್‌ನಿಂದ ಬುಧವಾರ ಆಯೋಜಿಸಲಾದ ಸ್ವೀಪ್ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು. ಅದು ನಮ್ಮ ಹಕ್ಕು; ಒಂದು ಮತ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಈ ಸಂದರ್ಭ ಮಂಗಳೂರು ತಾಪಂ ಇಒ ರಘು, ಕೆಎಸ್ಸಾರ್ಟಿಸಿ ಸಂಚಾಲಕ ನಿಯಂತ್ರಕ ಜೈಶಾಂತ್, ಮೆಕಾನಿಕಲ್ ಮುಖ್ಯಸ್ಥೆ ಆಶಾಲತಾ, ತಾಪಂ ಅಧೀಕ್ಷಕಿ ಕಲಾವತಿ, ಚಾಲಕರು, ನಿರ್ವಾಹಕರು, ಪ್ರಯಾಣಿಕರು ಪಾಲ್ಗೊಂಡಿದ್ದರು.