ಬಿ.ಕೆ.ವಿಶ್ವನಾಥ ಸ್ಮೃತಿ ಪ್ರಶಸ್ತಿ ಪ್ರದಾನ
ಮಂಗಳೂರು, ಮಾ.6: ಯಕ್ಷಗಾನವು ಪುರಾಣ-ಪುಣ್ಯಕಥೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಪ್ರಸಿದ್ಧ ಕಲೆಯಾಗಿದೆ. ಕಲಾವಿದರಾಗಿ, ಕಲಾಪೋಷಕರಾಗಿ ಯಕ್ಷಗಾನ ಸೇವೆಮಾಡುವವರಿಂದ ಸಮಾಜದಲ್ಲಿ ಧರ್ಮ ಜಾಗೃತಿಯುಂಟಾಗುವುದಲ್ಲದೆ, ದೈವಾನುಗ್ರಹವೂ ಲಭಿಸಲಿದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮಿನಾರಾಯಣ ಆಸ್ರಣ್ಣ ಹೇಳಿದ್ದಾರೆ.
ಕೂಳೂರಿನ ಶ್ರೀದೇವಿ ಪ್ರಸಾದ್ ಗೋಪಿನಿಲಯ ವಠಾರದಲ್ಲಿ ಹಮ್ಮಿಕೊಂಡ 55ನೇ ಯಕ್ಷ ಸಂಭ್ರಮ ಸೇವೆ ಬಯಲಾಟದ ಸಂದರ್ಭ ನಡೆದ ‘ಬಿ.ಕೆ.ವಿಶ್ವನಾಥ ಸ್ಮತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
►ಲಕ್ಷ್ಮಣ ಕೋಟ್ಯಾನ್‌ರಿಗೆ ಪ್ರಶಸ್ತಿ
ಕಟೀಲು ಮೇಳದ ಹಿರಿಯ ವೇಷಧಾರಿ ಹಾಗೂ ಅತ್ಯುತ್ತಮ ಕ್ರೀಡಾಪಟು ಲಕ್ಷ್ಮ್ಮಣ ಕೋಟ್ಯಾನ್‌ಗೆ 2018-19ನೇ ಸಾಲಿನ ‘ದಿ.ಬಿ.ಕೆ.ವಿಶ್ವನಾಥ ಸ್ಮತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ತುಳು ಅಕಾಡಮಿಯ ಮಾಜಿ ಸದಸ್ಯ ಯೋಗೀಶ್ ಕಾಂಚನ್ ಬೈಕಂಪಾಡಿ ಸನ್ಮಾನ ಪತ್ರ ವಾಚಿಸಿದರು.
ಕಟೀಲು ಕ್ಷೇತ್ರದ ಅರ್ಚಕ ವಾಸುದೇವ ಆಸ್ರಣ್ಣ, ವೆಂಕಟ್ರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕೂಳೂರು ಬೀಡಿನ ವಜ್ರಕುಮಾರ್ ಕರ್ಣಂತಾಯ ಬಲ್ಲಾಳರು ಅತಿಥಿಗಳಾಗಿದ್ದರು.
ಬಿ.ಕೆ.ಸಂದೀಪ್ ಸ್ವಾಗತಿಸಿದರು. ಬಿ.ಕೆ.ಶೈಲೇಂದ್ರ ವಂದಿಸಿದರು. ಶಿವರಾಮ ಪಣಂಬೂರು, ಬಿ.ಕೆ.ಸುಜಿತ್, ಗಂಗಾಧರ, ಹರೀಶ್ ಮತ್ತು ಸುಮಾ ರಾಜೇಂದ್ರ ಸಹಕರಿಸಿದರು.