ಮುಡಿಪು-ಮೂಳೂರು ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ
ಕೊಣಾಜೆ: ಮುಡಿಪು ಮುಖ್ಯ ರಸ್ತೆಯಿಂದ ಮೂಳೂರು ಇರಾ ಮಂಚಿ ಸಾಲೆತ್ತೂರು ಸಂಪರ್ಕಿಸುವ ಮುಖ್ಯ ರಸ್ತೆಗೆ ಈಗಾಗಲೇ 10ಕೋಟಿ ರೂ. ಅನುದಾನ ಬಿಡುಗಡೆಗೊಂಡು, ಪ್ರಥಮ ಹಂತದ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದ್ದು ಇರಾ ಮೂಳೂರು ರಸ್ತೆ ಶೀಘ್ರದಲ್ಲಿಯೇ ಅತ್ಯುತ್ತಮ ಮಾದರಿ ರಸ್ತೆಯಾಗಿ ಬದಲಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಮುಡಿಪು-ಮೂಳೂರು ಕೈಗಾರಿಕಾ ಪ್ರದೇಶ ಸಂಪರ್ಕಿಸುವ ಒಂದು ಕಿ. ಮೀ. ವಿಸ್ತೀರ್ಣದ ರಸ್ತೆ ಕಾಂಕ್ರಿಟೀಕರಣಕ್ಕೆ ಮಂಗಳವಾರ ಅವರು ಶಿಲಾನ್ಯಾಸಗೈದು ಮಾತನಾಡಿದರು.
ಮುಡಿಪು ಮೂಳೂರು ಪ್ರದೇಶಗಳು 2008ರಲ್ಲಿ ಮರು ವಿಂಗಡಣೆ ಬಳಿಕ ಮಂಗಳೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡವು. ಆಗ ಈ ಭಾಗಕ್ಕೆ ಕಾರಿನಲ್ಲಿ ಬಂದಾಗ ಈ ರಸ್ತೆಯಲ್ಲಿ ಸಂಚರಿಸಲು ಜೀಪಿನಲ್ಲಿ ಹೋಗುವಂತಹ ಪರಿಸ್ಥಿತಿ ಇತ್ತು. ಚುನಾವಣೆಯಲ್ಲಿ ಗೆದ್ದ ತಕ್ಷಣ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲು ಹಾಕುವ ಮೂಲಕ ಮೂಳೂರಿನಿಂದ ಮುಂದಕ್ಕೆ ಕಾಂಕ್ರಿಟೀಕರಣ ಮಾಡಿ ತಾತ್ಕಾಲಿಕ ಕಾಮಗಾರಿ ಮಾಡಿ ಮುಗಿಸಿದ್ದೆ ಎಂದರು.
ತದನಂತರ ಮುಡಿಪಿನಿಂದ ಮಂಚಿ ತನಕ ಸಂಪರ್ಕಿಸುವ ರಸ್ತೆಗೆ ಅನುದಾನ ಬಿಡುಗಡೆ ಮಾಡಿದಾಗ ಮುಡಿಪು ಮೂಳೂರು ರಸ್ತೆ ಕೆಐಡಿಬಿಐಗೆ ಸಂಬಂಧಪಟ್ಟಿರುವ ಹಿನ್ನೆಲೆಯಲ್ಲಿ ರಸ್ತೆ ಬಹಳಷ್ಟು ಅಗಲ ಹಾಗೂ ಸುಸಜ್ಜಿತವಾಗಿರಬೇಕು ಎಂಬ ಕಾರಣದಿಂದ ಕೆಐಡಿಬಿಐಗೆ ಮನವಿ ಕೊಟ್ಟು ಆ ಬಳಿಕ ಮೂಳೂರು ನಂತರದ ರಸ್ತೆಯನ್ನು ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಎರಡು ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಿದ್ದೇವೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸೇರಿದಂತೆ ಎಲ್ಲರ ಬೇಡಿಕೆಯಂತೆ ದ್ವಿಪಥ ರಸ್ತೆಯಾದರೆ ಮಾತ್ರ ಕೈಗಾರಿಕೆ ಪ್ರದೇಶಗಳಿಗೆ ವಾಹನಗಳು ಯಾವುದೇ ತೊಂದರೆ ಇಲ್ಲದೆ ಸಂಚರಿಸಲು ಸಾಧ್ಯ ಎಂಬುದನ್ನು ಕೈಗಾರಿಗೆ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರಿಗೂ ಈಗಿನ ಸಚಿವರಾಗಿರುವ ಆರ್. ಜಾರ್ಜ್ ಅವರಿಗೂ ಮನವರಿಕೆ ಮಾಡಿ ಮಾದರಿ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ 10ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ನಾಸಿರ್ ನಡುಪದವು, ಹನೀಫ್, ಬಶೀರ್, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಅರುಣ್ ಡಿಸೋಜ ಮುಡಿಪು ಹಾಗೂ ಎನ್. ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು.