ಮುಷ್ಕರದಲ್ಲಿ ಪಾಲ್ಗೊಂಡರೆ ಗಂಭೀರ ಪರಿಣಾಮ ಎದುರಿಸಿ: ಉದ್ಯೋಗಿಗಳಿಗೆ ಕೇಂದ್ರ ಸರಕಾರ ಎಚ್ಚರಿಕೆ

Update: 2019-03-06 18:15 GMT

ಹೊಸದಿಲ್ಲಿ, ಮಾ. 6: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ವಿರುದ್ಧ ಮಾರ್ಚ್ 13ರಂದು ಪ್ರತಿಭಟನೆ ನಡೆಸಿದರೆ, ಪರಿಣಾಮ ಎದುರಿಸಬೇಕಾದೀತು ಎಂದು ಕೇಂದ್ರ ಸರಕಾರ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ.

ನೂತನ ಪಿಂಚಣಿ ಯೋಜನೆ ವಿರುದ್ಧ ಮಾರ್ಚ್ 13ರಂದು ದೇಶಾದ್ಯಂತ ಹಾಗೂ ಹೊಸದಿಲ್ಲಿಯ ಜಂತರ್ ಮಂತರ್‌ನ ಎದುರು ಧರಣಿ, ಪ್ರತಿಭಟನೆ ನಡೆಸಲು ನ್ಯಾಶನಲ್ ಜಾಯಿಂಟ್ ಕೌನ್ಸಿಲ್ ಆಫ್ ಆ್ಯಕ್ಷನ್ ನಿರ್ಧರಿಸುವುದು ಗಮನಕ್ಕೆ ಬಂದಿದೆ ಎಂದು ಸಚಿವಾಲಯ ಹೇಳಿದೆ. ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲೇಖಿಸಿರುವ ಆದೇಶ, ಸಾಮೂಹಿಕ ರಜೆ, ನಿಧಾನವಾಗಿ ಚಲಿಸುವುದು ಅಥವಾ ಮುಷ್ಕರ, ಪ್ರತಿಭಟನೆ ರೂಪದ ಯಾವುದೇ ಕ್ರಮಗಳನ್ನು ಕೈಗೊಳ್ಳುವುದು ಸಹಿತ ಯಾವುದೇ ಮಾದರಿಯ ಮುಷ್ಕರದಲ್ಲಿ ಸರಕಾರಿ ಉದ್ಯೋಗಿಗಳು ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಯಾವುದೇ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡರೆ, ವೇತನ ಕಡಿತ, ಶಿಸ್ತು ಕ್ರಮ ಒಳಗೊಂಡಂತೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ.

ಪ್ರಸ್ತಾಪಿತ ಮುಷ್ಕರದ ಅವಧಿಯಲ್ಲಿ ಕ್ಯಾಶುವಲ್ ರಜೆ ಅಥವಾ ಇತರ ಯಾವುದೇ ರಜೆ ನೀಡಬೇಡಿ ಹಾಗೂ ಆಸಕ್ತ ಉದ್ಯೋಗಿಗಳು ಯಾವುದೇ ಅಡಚಣೆ ಇಲ್ಲದೆ ಕಚೇರಿಯ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಿ ಎಂದು ಎಲ್ಲ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ. ಮುಷ್ಕರಕ್ಕೆ ತೆರಳುವ ಉದ್ಯೋಗಿಗಳ ಬಗೆಗಿನ ವರದಿಯನ್ನು ಎಲ್ಲ ವಿಭಾಗೀಯ ಮುಖ್ಯಸ್ಥರಿಂದ ಕೋರಲಾಗಿದೆ. ಮುಷ್ಕರದ ದಿನ ಹಾಜರಾಗದ ಉದ್ಯೋಗಿಗಳ ಸಂಖ್ಯೆ ಹಾಗೂ ವಿವರಗಳ ವರದಿ ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News