×
Ad

ಮುಡಿಪು: ಪದವಿ ಪೂರ್ವ ಕಾಲೇಜಿನಲ್ಲಿ ಪ್ರಯೋಗಾಲಯ ಹಾಗೂ ತರಗತಿ ಕೊಠಡಿಗೆ ಶಿಲಾನ್ಯಾಸ

Update: 2019-03-06 23:45 IST

ಕೊಣಾಜೆ: ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ 92ಲಕ್ಷ ರೂ. ವೆಚ್ಚದಲ್ಲಿ ಮೂರು ಲ್ಯಾಬ್ ಹಾಗೂ ಒಂದು ತರಗತಿ ಕೊಠಡಿಗೆ ಅನುದಾನ ಬಿಡುಗಡೆ ಮಾಡಿದ್ದು ಆ ಮೂಲಕ ಇಲ್ಲಿನ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ 92ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಪ್ರಯೋಗಾಲಯ ಕೊಠಡಿ ಹಾಗೂ ಒಂದು ತಗರತಿ ಕೊಠಡಿಗೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಿಲಾನ್ಯಾಸಗೈದು ಮಾತನಾಡಿದರು.

ಕುರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಮಾತ್ರವಲ್ಲದೆ ಗಡಿನಾಡಿನ ಜನಸಾಮಾನ್ಯರ ಮಕ್ಕಳು ಕೂಡಾ ಶಿಕ್ಷಣ ಪಡೆದಯುತ್ತಿದ್ದಾರೆ. ಇಲ್ಲಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ಸಂಯುಕ್ತವಾಗಿ ಕಾರ್ಯಾಚರಿಸುತ್ತಿದ್ದು  ಎಲ್ಲರು ಹೊಂದಾಣಿಕೆಯಲ್ಲಿ ಸಾಗುತ್ತಿದ್ದಾರೆ. ಕೆಲವೊಂದು ತರಗತಿಗಳಿಗೆ ಕೊಠಡಿ ಕೊರತೆ ಇದ್ದರೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಇದುವರೆಗೆ ನಿಭಾಯಿಸಿಕೊಂಡಿರುವುದು ನಿಜಕ್ಕೂ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದರು.

ಇಲ್ಲಿನ ಪ್ರಥಮ ದರ್ಜೆ ಕಾಲೇಜಿಗೆ ಈಗಾಗಲೇ ನಾಲ್ಕು ಕೋಟಿ ರೂ. ಮಂಜೂರಾಗಿದೆ. ಪ್ರಥಮದರ್ಜೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು ಆ ಬಳಿಕ ಇದೀಗ ಪದವಿಪೂರ್ವ ಕಾಲೇಜಿನ ಕೆಲವು ಕೊಠಡಿಗಳಲ್ಲಿ ನಡೆಯುತ್ತಿರುವ ಪ್ರಥಮದರ್ಜೆ ಕಾಲೇಜು ಶಿಕ್ಷಣ  ಸಂಪೂರ್ಣವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಅದರಿಂದಾಗಿ ಪದವಿಪೂರ್ವ ಕಾಲೇಜಿಗೆ ಸಾಕಷ್ಟು ಕೊಠಡಿ ಲಭ್ಯವಾಗುತ್ತದೆ ಎಂದರು.

ಕುರ್ನಾಡು ಪದವಿಪೂರ್ವ ಕಾಲೇಜು ಆರಂಭವಾಗಿ ಹಲವು ದಶಕಗಳಾದರೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಪ್ರಯೋಗಾಲಯದ ಕೊರತೆ ಇತ್ತು. ವಿದ್ಯಾರ್ಥಿಗಳು ಪ್ರೌಢಶಾಲೆಯ ಪ್ರಯೋಗಾಲಯ ಬಳಸಿಕೊಳ್ಳುತ್ತಿದ್ದರು. ಇದೀಗ ಈ ಕಾಲೇಜಿಗೆ ಮೂರು ಪ್ರಯೋಗಾಲಯ ಕೊಠಡಿ ಹಾಗೂ ಒಂದು ತರಗತಿ ಕೊಠಡಿ ನಿರ್ಮಾಣಕ್ಕೆ ಒಟ್ಟು 92ಲಕ್ಷ ರೂ. ಅನುದಾನ ಬಿಡುಗಡೆ ಆಗಿ, ಶಿಲಾನ್ಯಾಸ ನಡೆದಿದ್ದು ಶೀಘ್ರದಲ್ಲಿಯೇ ಕಾಮಗಾರಿ ಮುಗಿಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಬೇಕು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯರುಗಳಾದ ಹೈದರ್ ಕೈರಂಗಳ, ನವೀನ್ ಪಾದಲ್ಪಾಡಿ, ಕುರ್ನಾಡು ಪ್ರಥಮ ದರ್ಜೆ ಕಾಲೇಜಿನ ಮೇಲುಸ್ತುವಾರಿ ಅಧ್ಯಕ್ಷ ಪ್ರಶಾಂತ್ ಕಾಜವ, ಸದಸ್ಯರುಗಳಾದ ಅಬ್ದುಲ್ ಜಲೀಲ್ ಮೋಂಟುಗೋಳಿ ಹಾಗೂ ನಾಸಿರ್ ನಡುಪದವು, ಕುರ್ನಾಡು ಪದವಿಪವೂರ್ವ ಕಾಲೇಜಿನ ಪ್ರಿನ್ಸಿಪಾಲ್ ಅಶ್ಪಕ್ ಅಹ್ಮದ್ ಮ್ಯಾಗೇರಿ, ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ. ಗಿರಿಧರ್ ರಾವ್, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಸದಸ್ಯೆ ಫ್ಲೋರಿನ್ ಡಿಸೋಜ, ಅರುಣ್ ಡಿಸೋಜ, ಎನ್. ಪದ್ಮನಾಭ ನರಿಂಗಾನ, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹಾಗೂ ಬಶೀರ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News