×
Ad

ಮಂಗಳೂರು: ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Update: 2019-03-07 17:55 IST

ಮಂಗಳೂರು, ಮಾ. 7: ಕ್ಷುಲ್ಲಕ ವಿಚಾರಕ್ಕಾಗಿ ದುಷ್ಕರ್ಮಿಗಳ ಗುಂಪೊಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಬಳ್ಳಾಲ್‌ಬಾಗ್‌ನ ಖಾಸಗಿ ಕಾಲೇಜು ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

ವಿಟ್ಲ ನಿವಾಸಿ ಮುಹಮ್ಮದ್ ರಾಫಿ (19), ದೇರಳಕಟ್ಟೆ ನಿವಾಸಿ ಶರಫುದ್ದೀನ್ (19) ಹಲ್ಲೆಗೊಳಗಾದವರು.

ಇಬ್ಬರೂ ವಿದ್ಯಾರ್ಥಿಗಳು ನಗರದ ಖಾಸಗಿ ಕಾಲೇಜೊಂದರ ಬಿಎಸ್ಸಿ ಇಂಟಿರಿಯರ್ ಡಿಸೈನಿಂಗ್ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

‘ಮಾ. 6ರಂದು ಕಾಲೇಜಿನ ಕಾರಿಡಾರಿನಲ್ಲಿ ಡ್ರಾಯಿಂಗ್ ಶೀಟ್‌ವೊಂದು ಬಿದ್ದಿರುವುದು ನನ್ನ ಗಮನಕ್ಕೆ ಬಂತು. ಶೀಟ್ ಯಾರದೆಂದು ಕೇಳಿಕೊಂಡು ಕಾಲೇಜಿನ ಆವರಣ ಸುತ್ತಾಡಿದೆ. ಕೊನೆಗೆ ವಿದ್ಯಾರ್ಥಿನಿಯೋರ್ವಳು ಡ್ರಾಯಿಂಗ್ ಶೀಟ್ ನನ್ನದು. ಈ ಶೀಟ್ ನೀನೇ ಕದ್ದಿರುವೆ ಎಂದು ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ’ ಎಂದು ಗಾಯಾಳು ಶರಫುದ್ದೀನ್ ಆರೋಪಿಸಿದ್ದಾರೆ.

‘ಹುಡುಗಿಯಾಗಿ ಈ ತರ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತನ್ನ ಪ್ರಿಯತಮ ಎನ್ನಲಾದ ಯುವಕನಿಗೆ ವಿಷಯ ಮುಟ್ಟಿಸಿದ್ದಾಳೆ. ವಿದ್ಯಾರ್ಥಿನಿಯ ಪ್ರಿಯತಮ ಎನ್ನಲಾದ ವ್ಯಕ್ತಿ ಸೇರಿದಂತೆ ನಾಲ್ವರು ಯುವಕರ ತಂಡ ಶರಫುದ್ದೀನ್ ಹಾಗೂ ರಾಫಿಗೆ ಕರೆ ಮಾಡಿ ಕಾಲೇಜು ಬಳಿ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಕಾರಣ ಕೇಳಿದಾಗ ಯಾವುದೇ ಉತ್ತರ ನೀಡದ ದುಷ್ಕರ್ಮಿಗಳು ಮತ್ತೇ ತಲೆ, ಸೊಂಟ, ಮುಖಕ್ಕೆ ಹೊಡೆದಿದ್ದಾರೆ’ ಎಂದು ಗಾಯಾಳು ಶರಫುದ್ದೀನ್ ದೂರಿದ್ದಾರೆ.

ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬರ್ಕೆ ಹಾಗೂ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News