ಭಟ್ಕಳ: ಬೋಟ್ ನಿಂದ ಬಿದ್ದು ಮೀನುಗಾರ ಮೃತ್ಯು
ಭಟ್ಕಳ, ಮಾ. 7: ಇಲ್ಲಿನ ಮಾನಿವಕುರ್ವೇ ಧಕ್ಕೆಯಲ್ಲಿ ನಿಲ್ಲಿಸಿದ್ದ ಬೋಟ್ ನಿಂದ ಇನ್ನೊಂದು ಬೋಟಿಗೆ ದಾಟುವ ಸಂದರ್ಭ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಮೃತ ಮೀನುಗಾರನನ್ನು ಕಾಯ್ಕಿಣಿಯ ಮಠದ ಹಿತ್ಲು ನಿವಾಸಿ ಉದಯ ನಾರಾಯಣ ನಾಯ್ಕ (45) ಎಂದು ಗುರುತಿಸಲಾಗಿದೆ.
ಮೃತ ಮೀನುಗಾರ ಆನಂದ ಮಂಜ ಖಾರ್ವಿ ಎಂಬವರ ಮಾಲಕತ್ವದ ಸಚ್ಚಿದಾನಂದ ಮೀನುಗಾರಿಕಾ ಬೋಟನಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯಾಹ್ನ ಒಂದು ಬೋಟ್ ನಿಂದ ಇನ್ನೊಂದು ಬೋಟ್ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಮೃತ ದೇಹಕ್ಕಾಗಿ ಸ್ಥಳಿಯರು ಮೀನುಗಾರರು ಸಾಕಷ್ಟು ಗಂಟೆ ಪ್ರಯತ್ನ ಪಟ್ಟಿದ್ದು ನಂತರ ಸ್ಥಳಿಯ ಈಜುಗಾರರು ಬಂದು ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ತೆರಳಿದ್ದು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಬೋಟ ಮಾಲಕ ಆನಂದ ಮಂಜ ಖಾರ್ವಿ ದೂರು ಸಲ್ಲಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಎಎಸೈ ಅಣ್ಣಪ್ಪ ವಿ. ಮೋಗೇರ ಮುಂದಿನ ತನಿಖೆ ಕೈಗೊಂಡಿದ್ದಾರೆ.