ವಿದ್ಯಾರ್ಥಿಗಳ ಮೇಲೆ ಹಲ್ಲೆ: ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಡಿಸಿಪಿ ಭೇಟಿ
ಮಂಗಳೂರು, ಮಾ. 7: ನಗರದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಾದ ಮಹಮ್ಮದ್ ರಾಫಿ ಮತ್ತು ಶರ್ಪುದ್ದೀನ್ ಎಂಬವರ ಮೇಲಿನ ಹಲ್ಲೆಯನ್ನು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲೆ ಖಂಡಿಸಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧನಕ್ಕೆ ಒತ್ತಾಯಿಸಿ ಸಹಾಯಕ ಕಮಿಷನರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಯುತಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಇಂತಹ ಕೃತ್ಯಗಳು ಮುಂದುವರಿಯಲು ಕಾರಣ. ಕಾಲೇಜಿನ ಹೊರಗಡೆಯಿಂದ ಬಂದ ದುಷ್ಕರ್ಮಿಗಳು ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ಬೆದರಿಸಿದ್ದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ನಿಯೋಗ ಸಹಾಯಕ ಕಮೀಷನರ್ ಉಮಾ ಪ್ರಶಾಂತ್ ಭೇಟಿ ನೀಡಿ ಮನವಿ ಮಾಡಿತು.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಮಹಮ್ಮದ್ ಸಾದಿಕ್, ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ, ಜಿಲ್ಲಾ ಸಮಿತಿ ಸದಸ್ಯರಾದ ಸುಹೈಲ್, ಫಹದ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.