‘ಮೂಢನಂಬಿಕೆ, ವೈಚಾರಿಕತೆ ಕೊರತೆಯಿಂದ ಕೋಮುವಾದ ವೃದ್ಧಿ’
ಉಡುಪಿ, ಮಾ.7: ಮೂಢನಂಬಿಕೆ, ಅಂಧಶ್ರದ್ಧೆ, ವೈಚಾರಿಕತೆಯ ಬಂಜೆತನ ಹಾಗೂ ದಾಸ್ಯ ಮನೋಭಾವನೆಯ ವಾತಾವರಣದಿಂದ ಇಂದು ಸಮಾಜದಲ್ಲಿ ಕೋಮುವಾದದ ಅಡಂಬರ ವೃದ್ಧಿಯಾಗಿದೆ ಎಂದು ಉಡುಪಿ ಜಿಲ್ಲಾ ಕೋಮು ಸೌಹಾರ್ದ ವೇದಿಕೆ ಗೌರವಾಧ್ಯಕ, ಸಾಹಿತಿ ಹಾಗೂ ವೈಚಾರಿಕ ಬರಹಗಾರ ಬಿ.ಗೋಪಾಲ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬೆಂಗಳೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಡುಪಿ ಹಾಗೂ ಉಡುಪಿ ಡಾ.ಟಿ.ಎಂ.ಎ. ಪೈ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಮಾಧವ ಮಂದಿರದಲ್ಲಿ ಗುರುವಾರ ನಡೆದ ವರ್ತಮಾನಕ್ಕೂ ವಚನ ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಚನಕಾರರು ತಮ್ಮ ವಚನಗಳಲ್ಲಿ ಕಟು ಸತ್ಯ ಹಾಗೂ ನೇರವಾದ ಮಾತುಗಳನ್ನು ಹೇಳುತ್ತಾರೆ. ಅವರ ಸಾಹಿತ್ಯದಲ್ಲಿ ಮಾಂತ್ರಿಕತೆಯಿದೆ. ಓದುಗರು, ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುವ ಶಕ್ತಿಯಿದೆ. ಆದರೆ ನಾವಿಂದು ದಾಸ್ಯ ಮನೋಭಾವನೆಯಿಂದಾಗಿ ಋಣಾತ್ಮಕ ಚಿಂತನೆಗಳನ್ನು ಅಳವಡಿಸಿ ಕೊಳ್ಳುತ್ತಿದ್ದೇವೆ. ಇದು ಕೋಮುವಾದದ ಅಡಂಬರಕ್ಕೆ ಸಹಕಾರಿ ಯಾಗುತ್ತಿದೆ. ಈ ನಿಟ್ಟಿನಲ್ಲಿ ಋಣಾತ್ಮಕತೆಯನ್ನು ತಡೆಗಟ್ಟುವಲ್ಲಿ ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಿದೆ ಎಂದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ. ಜಯಪ್ರಕಾಶ ಶೆಟ್ಟಿ ವಚನ ಕ್ರಾಂತಿಯ ಪ್ರತಿಭಟನೆಯ ನೆಲೆಗಳು ಕುರಿತು ಮಾತನಾಡಿ, ಗುರುತು ಸ್ಥಾಪಿತವಾದಾಗ ಅಧಿಕಾರವಾಗಿ ಆಳಲು ಆರಂಭವಾಗುತ್ತದೆ. ಆಗ ಅಸಮಾನತೆ ಬೀಜ ಬಿತ್ತನೆ ಯಾಗುತತಿದೆ. ಆದರೆ ಶರಣರ ಕಲ್ಪನೆಯೇ ಒಂದು ಬಯಲಿನಂತೆ. ಅದು ಚಲನಶೀಲ ವಲಯವಾಗಿತ್ತು ಎಂದರು.
ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ ಬಿ., ವಚನಗಳಲ್ಲಿ ವ್ಯಕ್ತವಾಗಿರುವ ಜಾಗತಿಕ ವೌಲ್ಯಗಳು ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿ ಶಿಕ್ಷಕರಿಂದ ಆಯ್ದ ವಚನಗಳ ಗಾಯನ ನಡೆಯಿತು.
ಉಡುಪಿ ಡಾ.ಟಿ.ಎಂ.ಎ. ಪೈ ಶಿಕ್ಷಣ ಕಾಲೇಜು ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇಟಿ ಮುದಿಯಪ್ಪ ವಿಶ್ಲೇಷಣೆ ಮಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಯು.ಸಿ. ನಿರಂಜನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರೂಪಾ ಕೆ. ಕಾರ್ಯಕ್ರಮ ನಿರೂಪಿಸಿದರು.