×
Ad

ಮಂಗಳೂರು: ನಾಲ್ಕು ದಶಕದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2019-03-07 22:26 IST

ಮಂಗಳೂರು, ಮಾ. 7: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಗಣೇಶ್ ಶೆಟ್ಟಿ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ನಾಲ್ಕು ದಶಕದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಪ್ಪಿನಮೊಗರು ನಿವಾಸಿ ಅವಿಲ್ ಡಿಸೋಜ (56) ಬಂಧಿತ ಆರೋಪಿ.

ಪ್ರಕರಣ ವಿವರ

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1980ರಲ್ಲಿ ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 39 ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದ ಎಂದು ತಿಳಿದುಬಂದಿದೆ.

ಆರೋಪಿಯ ಪತ್ತೆಯ ಬಗ್ಗೆ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಇದೀಗ ಆರೋಪಿ ಮಂಗಳೂರಿಗೆ ಬಂದು ಕುಂಪಲದಲ್ಲಿ ಮನೆ ಮಾಡಿದ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎಸಿಪಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News