ಬಾಲಕರಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
ಮಂಗಳೂರು, ಮಾ.7: ನಗರದ ಕುದ್ರೋಳಿ ಸಮೀಪ ಇಬ್ಬರು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಸ್ಸಾಂ ಮೂಲದ ಯುವಕ ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಕಲಸುದ್ದೀನ್ ಬುರ್ಬುಹಯ್ಯ (35) ಬಂಧಿತ ಆರೋಪಿ. ಮೂಲತಃ ಅಸ್ಸಾಂನವನಾಗಿದ್ದು, ನಗರದಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದ.
ಈತ ಕುದ್ರೋಳಿ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಈತ ಪಕ್ಕದ ಮನೆಯ 7 ವರ್ಷ ಹಾಗೂ 17ವರ್ಷದ ಬಾಲಕರನ್ನು ಚಾಕ್ಲೇಟ್ ನೆಪದಲ್ಲಿ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬುಧವಾರವೂ ಈತ ಇದೇ ರೀತಿ ಬಾಲಕನನ್ನು ಕರೆದು ಮನೆಯ ಬಾಗಿಲು ಹಾಕಿದಾಗ ನೋಡಿದ ಬಾಲಕನ ತಾಯಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಎಲ್ಲರೂ ಒಟ್ಟು ಸೇರಿ ಬಾಗಿಲು ತೆರೆಯಲು ಒತ್ತಾಯ ಮಾಡಿದ ಆತ ಬಾಗಿಲು ತೆರೆಯಲೇ ಇಲ್ಲ. ಇದರಿಂದ ಎಲ್ಲರೂ ಸೇರಿ ಬಾಗಿಲು ಹೊಡೆದು ಒಳಪ್ರವೇಶಿಸಿದರು. ಅಷ್ಟರಲ್ಲಿ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ವಿಷಯ ತಿಳಿದ ಪೊಲೀಸರು ಘಟನೆ ಸ್ಥಳಕ್ಕೆ ಆಗಮಿಸಿ ಆತನಿಗಾಗಿ ಶೋಧ ನಡೆಸಿ, ರಾತ್ರಿ ಹೊತ್ತು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಬಂದರು ಠಾಣಾ ಇನ್‌ಸ್ಪೆಕ್ಟರ್ ಗೋವಿಂದರಾಜು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.