×
Ad

‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ: ಯು.ಟಿ.ಖಾದರ್

Update: 2019-03-07 22:30 IST

ಮಂಗಳೂರು, ಮಾ.7: ನಗರದ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ 17.50 ಕೋ.ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಡಿ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಗುರುವಾರ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡಾಂಗಣದ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಕನ್ಸಲ್ಟಂಟ್ ಮತ್ತು ಸ್ಟೇಕ್‌ಹೋಲ್ಡ್‌ರ್ಸ್‌ಗಳ ಸಭೆ ನಡೆಸಿ ಸಮಗ್ರ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು. ತಲಾ 5 ಕೋ.ರೂ. ವೆಚ್ಚದಲ್ಲಿ ಉರ್ವದ ಕಬ್ಬಡಿ ಮೈದಾನ, ಬ್ಯಾಡ್ಮಿಂಟನ್ ಕ್ರೀಡಾಂಗಣದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಿದರು.

ಕ್ರೀಡಾಂಗಣ ಅಧೀನದಲ್ಲಿ ಬರುವ ಅಂಗಡಿಗಳ ಬಾಡಿಗೆಗಳನ್ನು ಏಲಂ ಹಾಕಲು ಸೂಚಿಸಿದ ಸಚಿವರು, ಈ ಅಂಗಡಿಗಳ ವ್ಯಾಪ್ತಿಯಲ್ಲಿ ಕ್ರೀಡಾ ಚಟುವಟಿಕೆಗೆ ಕುಂದುಬಾರದ ರೀತಿಯಲ್ಲಿರಬೇಕು ಮತ್ತು ಫುಟ್ಬಾಲ್ ಅಂಗಣ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು ಎಂದರು.

ಸಭೆಯ ಬಳಿಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕ್ರೀಡಾಂಗಣದ ಮೇಲ್ಛಾವಣಿಯನ್ನು ಪರಿಶೀಲಿಸಿ ನಾದುರಸ್ಥಿಯಲ್ಲಿರುವ ಮೇಲ್ಛಾವಣಿಯನ್ನು ತೆಗೆಸಿ ಶೀಟ್ ಅಳವಡಿಸುವ ಬಗ್ಗೆ ಪಿಆರ್‌ಇಡಿ ಇಂಜಿನಿಯರ್‌ಗೆ ಸೂಚನೆ ನೀಡಿದರು.

ಈ ಸಂದರ್ಭ ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಭಾಸ್ಕರ ಮೊಯ್ಲಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅನಿತಾ, ಸ್ಮಾರ್ಟ್ ಸಿಟಿಯ ಆಡಳಿತ ನಿರ್ದೇಶಕ ನಾರಾಯಣಪ್ಪ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News