'ಜನೌಷಧಿ ಕೇಂದ್ರಗಳಿಂದ ಅಂತ್ಯೋದಯ ಪರಿಕಲ್ಪನೆಗೆ ಪ್ರಧಾನಿ ಸ್ಪಷ್ಟ ಚಿತ್ರಣ'
ಪುತ್ತೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಹಕ್ಕು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಂತ್ಯೋದಯದ ಪರಿಕಲ್ಪನೆಗೆ ಸ್ಪಷ್ಟ ಚಿತ್ರಣ ಬರೆಯುವ ಕೆಲಸ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಗುರುವಾರ ಪುತ್ತೂರಿನ ಪ್ರಗತಿ ಆಸ್ಪತ್ರೆಯ ಜನೌಷಧಿ ಕೇಂದ್ರದ ಬಳಿಯಲ್ಲಿ ನಡೆದ ಜನೌಷಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ನಡೆಸಲಾದ ಸಮೀಕ್ಷೆಯಂತೆ ಶೇ. 60 ಮಂದಿ ಅನಾರೋಗ್ಯದ ಕಾರಣದಿಂದಾಗಿ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಪ್ರಧಾನಿಯವರು ದೀನ್‍ದಯಾಳ್ ಉಪಾಧ್ಯಾಯ ಅವರ ಆಶಯದಂತೆ ಈ ಯೋಜನೆಯನ್ನು ರೂಪಿಸಿದರು. 2008ರಲ್ಲಿಯೇ ಜನೌಷಧಿಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಆದರೆ ಈ ಯೋಜನೆ ಐಸಿಯು ನಲ್ಲಿತ್ತು. ಅದನ್ನು ಅಲ್ಲಿಂದ ಹೊರತಂದು ಜನರ ಮನೆಗೆ ತಲುಪಿಸುವ ಕೆಲಸವನ್ನು ಪ್ರಧಾನಿಯವರು ಮಾಡಿದ್ದಾರೆ. ದೇಶದ ಜನರು ಈ ಯೋಜನೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಜನೌಷಧಿಯು ತಳ ಮಟ್ಟದ ಜನರಿಗೆ ಗುಣಮಟ್ಟದ ಔಷಧಿಯನ್ನು ನೀಡುವ ವ್ಯವಸ್ಥೆಯಾಗಿದೆ. ಇದರಿಂದಾಗಿ ಸಾಕಷ್ಟು ಮಂದಿಯ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಈ ಔಷಧಿಯ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಬೇಕು. ಎಲ್ಲರೂ ಇದರ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ ಜನೌಷಧಿ ದಿನಾಚರಣೆಯು ದೇಶದ 130 ಕೋಟಿ ಜನರಿಗೆ ಉತ್ತಮ ಸಂದೇಶವನ್ನು ನೀಡಿದೆ. ಭ್ರಷ್ಟಾಚಾರ, ಭಯೋತ್ಪಾಧನೆಗೆ ಸರ್ಜರಿ ಮಾಡಿರುವ ಪ್ರಧಾನಿಯವರು ಜನೌಷಧಿ ಕೇಂದ್ರ ಸ್ಥಾಪನೆಯ ಮೂಲಕ ಔಷಧಿಗಳಿಗೂ ಸರ್ಜರಿ ಮಾಡಿ ದೇಶದ ಜನರಿಗೆ ಕಾಯಕಲ್ಪ ನೀಡಿದ್ದಾರೆ. ಔಷಧಿಗಾಗಿ ಖರ್ಚು ಮಾಡುವುದನ್ನು ತಪ್ಪಿಸಿ ಆರ್ಥಿಕ ಉಳಿತಾಯಕ್ಕೆ ಕಾರಣಕರ್ತರಾಗಿದ್ದಾರೆ ಎಂದರು.
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೊಡಗು ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ನವೀನ್ ಕುಮಾರ್, ಜನೌಷಧಿ ಸಹಾಯಕ ನಿಯಂತ್ರಣಾಧಿ ಕಾರಿಗಳಾದ ಶಂಕರ್ ನಾಯಕ್, ರಮಾಕಾಂತ್ ಆರ್ ಕುಂಟೆ, ಪ್ರಗತಿ ಆಸ್ಪತ್ರೆಯ ವೈದ್ಯ ಡಾ. ಶ್ರೀಪತಿ ರಾವ್, ಜನೌಷಧಿ ಫಲಾನುಭವಿಗಳಾದ ಸುಬ್ರಹ್ಮಣ್ಯ ಶಾಸ್ತ್ರಿ, ಸಿರಿಲ್ ಡಿಸೋಜ ಮಾತನಾಡಿದರು.
ಜನೌಷಧಿ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ. ಅನಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಸ್ವಾಗತಿಸಿದರು. ಪ್ರಗತಿ ಆಸ್ಪತ್ರೆಯ ವೈದ್ಯೆ ಡಾ. ಸುಧಾ ಎಸ್ ರಾವ್ ಅತಿಥಿಗಳನ್ನು ಗೌರವಿಸಿದರು. ಸುಳ್ಯ ಜನೌಷಧಿ ಕೇಂದ್ರದ ಭವಿನ್ ಕುಮಾರ್ ನಿರೂಪಿಸಿದರು.