ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ-ಎ.ಸಿ. ಕೃಷ್ಣಮೂರ್ತಿ
ಪುತ್ತೂರು, ಮಾ. 7: ಚುನಾವಣೆ ಸಂದರ್ಭ ಪ್ರತಿಯೊಬ್ಬರ ದೃಷ್ಟಿಯೂ ಮತದಾನದ ಕಡೆಗೇ ಇರುವುದರಿಂದ ಯಾವುದೇ ಕಾರಣಕ್ಕೂ ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಪುತ್ತೂರು ವಕೀಲರ ಸಂಘದ ಪರಾಶರ ಸಭಾಭವನದಲ್ಲಿ ಬುಧವಾರ ನ್ಯಾಯಾಧೀಶರು ಹಾಗೂ ವಕೀಲರಿಗೆ ಮತಯಂತ್ರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ವ್ಯವಸ್ಥೆಯನ್ನು ಹಾಳು ಮಾಡಬೇಕು ಎಂದರೆ ಇಡೀಯ ವ್ಯವಸ್ಥೆಯೇ ಅದರಲ್ಲಿ ಕೈ ಜೋಡಿಸಿರಬೇಕು. ಮತದಾನದ ಸಮಯದಲ್ಲಿ ಪ್ರತಿಯೊಬ್ಬರೂ ಮತದಾನದ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ. ಆದ್ದರಿಂದ ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ಅಂತಹ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳದೇ, ಮತದಾನದ ದಿನ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡರು.
ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಂಜುನಾಥ ಮಾತನಾಡಿ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದ ಅವರು, ಮತದಾನದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಶುಭಹಾರೈಸಿದರು.
ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ, ಜೆಎಂಎಫ್‍ಸಿ ಲತಾದೇವಿ ಜಿ.ಎ., ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾ„ಕಾರಿ ಪ್ರಕಾಶ್ ಪಿ.ಎಂ., ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾ„ಕಾರದ ಸದಸ್ಯ ಉದಯಶಂಕರ ಶೆಟ್ಟಿ, ಪುತ್ತೂರು ವಕೀಲರ ಸಂಘದ ಜತೆ ಕಾರ್ಯದರ್ಶಿ ಮಮತಾ ಬಿ. ಸುವರ್ಣ ಉಪಸ್ಥಿತರಿದ್ದರು.
ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್.ಎಸ್. ವಂದಿಸಿದರು. ವಕೀಲರಾದ ಸಿದ್ದೀಕ್ ಕೆ.ಎಂ., ಕೃಷ್ಣಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.