ಬಿಜೆಪಿಯದ್ದು ಜೂಟ್-ಬೂಟ್ ಅಭಿಯಾನ: ಅಖಿಲೇಶ್ ವ್ಯಂಗ್ಯ

Update: 2019-03-07 17:54 GMT

ಲಖ್ನೊ,ಮಾ.7: ಬಿಜೆಪಿ ಶಾಸಕ ಮತ್ತು ಸಂಸದ ಪರಸ್ಪರರ ಮೇಲೆ ಬೂಟಿನಿಂದ ದಾಳಿ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ಮಾತನಾಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಜೆಪಿಯದ್ದು ಜೂಟ್-ಬೂಟ್ (ಸುಳ್ಳು ಮತ್ತು ಬೂಟು) ಅಭಿಯಾನವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಮಧ್ಯೆಯೇ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಸರಕಾರ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ, ಈ ಸರಕಾರ ಸುಳ್ಳಿನ ಸರಕಾರ ಎಂದು ಅಖಿಲೇಶ್ ಕುಟುಕಿದ್ದಾರೆ. ಮೊದಲಗೆ ಸಮಾನಾಂತರ ಮಾತುಕತೆ ನಡೆಸಲಾಗಿತ್ತು. ನಂತರ ರಫೇಲ್ ದಾಖಲೆಗಳು ಕಳವಾದವು. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಸಂಸದ ಮತ್ತು ಶಾಸಕರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಪರಸ್ಪರರ ಮೇಲೆ ಬೂಟಿನಿಂದ ಹಲ್ಲೆ ನಡೆಸಿದ್ದಾರೆ. ಇದೀಗ ಬಿಜೆಪಿ ಕಾರ್ಯಕರ್ತರು, ಇದು ಯಾವ ಅಭಿಯಾನ ಎಂದು ತಮ್ಮ ನಾಯಕರನ್ನು ಕೇಳುತ್ತಿದ್ದಾರೆ. ಸುಳ್ಳು ಮತ್ತು ಬೂಟಿನದ್ದೇ ಅಥವಾ ಯುವಕರು ಮತ್ತು ಬೂತ್‌ನದ್ದೇ? ಎಂದು ಯಾದವ್ ಬಿಜೆಪಿ ನಾಯಕರನ್ನು ಕೆಣಕಿದ್ದಾರೆ.

ಎಸ್‌ಪಿ ಮಿತ್ರ ಪಕ್ಷ ಬಿಎಸ್‌ಪಿ ನಾಯಕಿ ಮಾಯಾವತಿ ಕೂಡಾ ರಫೇಲ್ ಒಪ್ಪಂದದ ದಾಖಲೆಗಳು ಕಳವಾಗಿರುವ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಪ್ರಧಾನಿ ಮೋದಿ ಓರ್ವ ಬೇಜವಾಬ್ದಾರಿ ಚೌಕಿದಾರ ಎಂದು ಜರೆದಿದ್ದಾರೆ. ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ಕಳವಾಗಿವೆ ಎಂದು ಮೋದಿ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಬಹಳ ವಿಚಿತ್ರ ಮತ್ತು ಬೇಜವಾಬ್ದಾರಿ ಚೌಕಿದಾರ. ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿ ಸುರಕ್ಷಿತ ಕೈಗಳಲ್ಲಿದೆಯೇ? ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News