ಕಾಶ್ಮೀರಿ ಸಹೋದರರ ಮೇಲೆ ಹಲ್ಲೆ ನಡೆಸುವವರು ಅವಿವೇಕಿಗಳು: ಪ್ರಧಾನಿ ಮೋದಿ

Update: 2019-03-08 14:41 GMT

ಕಾನ್ಪುರ , ಮಾ.8: ಉತ್ತರಪ್ರದೇಶದ ಲಕ್ನೊದಲ್ಲಿ ಬುಧವಾರ ಇಬ್ಬರು ಕಾಶ್ಮೀರಿ ವರ್ತಕರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿರುವ ಪ್ರಧಾನಿ ಮೋದಿ, ಏಕತೆಯ ವಾತಾವರಣವನ್ನು ಉಳಿಸಿಕೊಳ್ಳುವುದು ಅತ್ಯಂತ ಮಹತ್ವಪೂರ್ಣವಾಗಿದೆ . ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಕಾಶ್ಮೀರದ ಯುವಕರಿಗೆ ರಕ್ಷಣೆ ಒದಗಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

“ಲಕ್ನೊದಲ್ಲಿ ಕೆಲವು ಅವಿವೇಕಿಗಳು ನಮ್ಮ ಕಾಶ್ಮೀರಿ ಸಹೋದರರ ಮೇಲೆ ನಡೆಸಿರುವ ಕೃತ್ಯದ ಬಗ್ಗೆ ಉತ್ತರ ಪ್ರದೇಶ ಸರಕಾರ ಪ್ರಾಮಾಣಿಕವಾಗಿ ತನಿಖೆ ನಡೆಸಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ತಿಂಗಳು ಸಿಆರ್‌ಪಿಎಫ್ ಯೋಧರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಮೃತಪಟ್ಟಿದ್ದರು. ಬಳಿಕ ದೇಶದ ಹಲವೆಡೆ ಕಾಶ್ಮೀರ ವಿದ್ಯಾರ್ಥಿಗಳು ಹಾಗೂ ಜನತೆಯನ್ನು ಗುರಿಯಾಗಿಸಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇದರ ಮುಂದುವರಿದ ಭಾಗವಾಗಿ ಬುಧವಾರ ಲಕ್ನೊದಲ್ಲಿ ಇಬ್ಬರು ಕಾಶ್ಮೀರಿ ವ್ಯಾಪಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕೇಸರಿ ದಿರಿಸಿನಲ್ಲಿರುವ ಕೆಲವು ವ್ಯಕ್ತಿಗಳು ದೊಣ್ಣೆಯಿಂದ ವ್ಯಾಪಾರಿಗಳನ್ನು ಥಳಿಸುವುದಲ್ಲದೆ ಅವರ ಶರ್ಟ್‌ನ ಕಾಲರ್ ಹಿಡಿದು ಎಳೆಯುತ್ತಾ ಅವಾಚ್ಯವಾಗಿ ನಿಂದಿಸಿದ್ದರು. ಅಲ್ಲದೆ ತಾವು ಭಾರತೀಯರೆಂದು ದೃಢಪಡಿಸುವಂತೆ ವ್ಯಾಪಾರಿಗಳನ್ನು ಒತ್ತಾಯಿಸಿದ್ದರು. ಈ ಘಟನೆಯ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಕಾಶ್ಮೀರದ ವ್ಯಾಪಾರಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ್ದು ಕಾಶ್ಮೀರಿಗಳು ನಮ್ಮ ಜನರೇ ಆಗಿದ್ದಾರೆ ಮತ್ತು ಆಗಿರುತ್ತಾರೆ. ಕಾಶ್ಮೀರಿ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಅಲ್ಲದೆ ಬಿಜೆಪಿ ಕಾರ್ಯಕರ್ತರಿಗೂ ಕಠಿಣ ಸಂದೇಶ ನೀಡಿರುವ ಅವರು, ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕೆಲವರು ತೊಂದರೆ ನೀಡುತ್ತಿದ್ದರೆ, ಆಗ ವಿದ್ಯಾರ್ಥಿಗಳಿಗೆ ನೆರವಾಗುವುದು ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದವರು ತಿಳಿಸಿದ್ದಾರೆ. ಲಕ್ನೋದಲ್ಲಿ ಕಾಶ್ಮೀರಿ ವರ್ತಕರ ಮೇಲಿನ ದಾಳಿಯ ವಿಡಿಯೋವನ್ನು ಉಲ್ಲೇಖಿಸಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ, ಇಂತಹ ವೀಡಿಯೊಗಳು ಜಮ್ಮು ಕಾಶ್ಮೀರದಲ್ಲಿ ಭಾರತದ ವಿಚಾರಗಳಿಗೆ ಇಂತಹ ಕೃತ್ಯಗಳು ಹೆಚ್ಚಿನ ಹಾನಿ ಎಸಗುತ್ತವೆ. ಒಂದೆಡೆ ಬೀದಿಯಲ್ಲಿ ಆರೆಸ್ಸೆಸ್/ಬಜರಂಗದಳದ ರೌಡಿಗಳು ಈ ರೀತಿ ಕಾಶ್ಮೀರಿಗಳನ್ನು ಥಳಿಸುವುದು, ಇನ್ನೊಂದೆಡೆ ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂದು ಘೋಷಣೆ ಕೂಗುವುದು ವಿಪರ್ಯಾಸಕರ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News