×
Ad

ಹಲವರಿಗೆ ಮತದಾನ ಹಕ್ಕು ನಿರಾಕರಣೆ: ಸುಪ್ರೀಂ ಕೋರ್ಟ್ ಗೆ ಹಾಜರಾಗುವಂತೆ ಚು.ಆಯೋಗಕ್ಕೆ ಸೂಚನೆ

Update: 2019-03-08 20:29 IST

ಹೊಸದಿಲ್ಲಿ,ಮಾ.8: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂನ ಕೆಲವು ಪಂಗಡಗಳ ವ್ಯಕ್ತಿಗಳಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಗೆ ಸಂಬಂಧಿಸಿದಂತೆ ಮಾರ್ಚ್ 12ರಂದು ತನ್ನ ಮುಂದೆ ಹಾಜರಾಗುವಂತೆ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಈ ಕುರಿತು ಫೆಬ್ರವರಿ ಒಂದರಂದೇ ನೋಟಿಸ್ ಜಾರಿ ಮಾಡಿದ್ದರೂ ಚುನಾವಣಾ ಆಯೋಗವನ್ನು ಪ್ರತಿನಿಧಿಸಲು ಯಾರೂ ನ್ಯಾಯಾಲಯಕ್ಕೆ ಆಗಮಿಸದಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಜುಲೈ 30, 2018ರಲ್ಲಿ ಪ್ರಕಟಗೊಂಡ ರಾಷ್ಟ್ರೀಯ ನಾಗರಿಕತ್ವ ನೋಂದಣಿಯ (ಎನ್‌ಆರ್‌ಸಿ) ಕರಡು ಪ್ರತಿಯಲ್ಲಿ ಗುರುತಿಸಲಾಗಿದ್ದ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಪಿಐಎಲ್‌ನಲ್ಲಿ ದೂರಲಾಗಿದೆ. ಎನ್‌ಆರ್‌ಸಿ ಕರಡು ಪ್ರತಿಯಲ್ಲಿ ಹೆಸರಿಸಲಾಗದ ಕೆಲವು ವ್ಯಕ್ತಿಗಳ ಹೆಸರುಗಳನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ವ್ಯಕ್ತಿಗಳ ಹೆಸರುಗಳು ಎನ್‌ಆರ್‌ಸಿ ಕರಡು ಪ್ರತಿಯಲ್ಲಿ ಇರದಿದ್ದರೂ ತಮ್ಮ ಹೆಸರನ್ನು ಸೇರಿಸುವಂತೆ ಅವರು ಅರ್ಜಿಗಳನ್ನು ಸಲ್ಲಿಸಿದ್ದರು. ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.

ವಿದೇಶಿಗರ ನ್ಯಾಯಾಧೀಕರಣ ಮತ್ತು ಗುವಾಹಟಿ ಉಚ್ಚ ನ್ಯಾಯಾಲಯ ವಿದೇಶಿಗರು ಎಂದು ಘೋಷಿಸಿರುವ, ಆದರೆ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿರುವಂಥ ವ್ಯಕ್ತಿಗಳ ಹೆಸರುಗಳೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News