ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿ ಬಂಧನ ರಕ್ಷಣೆ ಅವಧಿ ವಿಸ್ತರಣೆ
ಹೊಸದಿಲ್ಲಿ,ಮಾ.8: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿಗೆ ನೀಡಿದ್ದ ಮಧ್ಯಂತರ ಬಂಧನ ರಕ್ಷಣೆಯನ್ನು ದಿಲ್ಲಿ ನ್ಯಾಯಾಲಯ ಮಾರ್ಚ್ 25ರವರೆಗೆ ವಿಸ್ತರಿಸಿದೆ. ಕೇಂದ್ರ ತನಿಖಾ ಮಂಡಳಿ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಫೆಬ್ರವರಿ 18ರಂದು ನ್ಯಾಯಾಲಯ, ಚಿದಂಬರಂ ಮತ್ತು ಕಾರ್ತಿಯ ಮಧ್ಯಂತರ ರಕ್ಷಣೆಯನ್ನು ಮಾರ್ಚ್ 8ರವರೆಗೆ ವಿಸ್ತರಿಸಿತ್ತು. 2006ರಲ್ಲಿ ಏರ್‌ಸೆಲ್‌ನಲ್ಲಿ ಹೂಡಿಕೆ ಮಾಡಲು ಗ್ಲೋಬಲ್ ಕಮ್ಯೂನಿಕೇಶನ್ ಹೋಲ್ಡಿಂಗ್ ಸರ್ವಿಸಸ್ ಲಿ.ಗೆ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್‌ಐಪಿಬಿ) ನೀಡಿದ ಒಪ್ಪಿಗೆಗೆ ಸಂಬಂಧಿಸಿ ಈ ಪ್ರಕರಣ ದಾಖಲಿಸಲಾಗಿದೆ. ಆ ಅವಧಿಯಲ್ಲಿ ಪಿ.ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದರು ಮತ್ತು ಏರ್‌ಸೆಲ್ ಮ್ಯಾಕ್ಸಿಸ್ ವ್ಯವಹಾರದಲ್ಲಿ ಲಂಚ ಪಾವತಿಗೆ ಕಾರ್ತಿ ಚಿದಂಬರಂ ನೆರವಾಗಿದ್ದರು ಎಂದು ಆರೋಪಿಸಲಾಗಿದೆ. ಕೇವಲ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಬಹುದಾಗಿದ್ದ ಇಂಥ ಹೂಡಿಕೆಗಳಿಗೆ ವಿತ್ತ ಸಚಿವ ಪಿ.ಚಿದಂಬರಮ್ ಹೇಗೆ ಒಪ್ಪಿಗೆ ನೀಡಿದರು ಎಂಬುದನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.