ರಫೇಲ್ ದಾಖಲೆಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದ ಕಳವಾಗಿಲ್ಲ: ತಿಪ್ಪರಲಾಗ ಹೊಡೆದ ಅಟಾರ್ನಿ ಜನರಲ್
ಹೊಸದಿಲ್ಲಿ,ಮಾ.3: ರಕ್ಷಣಾ ಸಚಿವಾಲಯದಿಂದ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಅಪಹರಿಸಲಾಗಿಲ್ಲವೆಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ತಾನು ಸರಕಾರವು ಅತ್ಯಂತ ಗೌಪ್ಯವಾದುದೆಂದು ಪರಿಗಣಿಸಿರುವ ಮೂಲ ದಾಖಲೆಪತ್ರಗಳ ‘ಫೋಟೋಕಾಪಿ’ಗಳನ್ನು ಅರ್ಜಿದಾರರು ಬಳಸಿಕೊಂಡಿ ದ್ದಾರೆಂಬ ಅರ್ಥದಲ್ಲಿ ಹಾಗೆ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ರಫೇಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಅಪಹರಿಸಲಾಗಿದೆಯೆಂದು ವೇಣುಗೋಪಾಲ್ ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿರುವುದು ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ಅತ್ಯಂತ ಸೂಕ್ಷ್ಮವಾದ ದಾಖಲೆಪತ್ರಗಳು ಅಪಹರಣವಾಗಿರುವುದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ವಾಗ್ದಾಳಿ ನಡೆಸಿದ್ದರಲ್ಲದೆ, ಈ ಬಗ್ಗೆ ತನಿಖೆಗೂ ಆದೇಶಿಸಿದ್ದರು
ರಫೇಲ್ ಒಪ್ಪಂದದ ಬಗ್ಗೆ ತನಿಖೆಗೆ ಆಗ್ರಹಿಸಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ಪ್ರಶಾಂತ್ ಭೂಷಣ್ ಸಲ್ಲಿಸಿದ ಮೇಲ್ಮನವಿ ಅರ್ಜಿಯಲ್ಲಿ ಲಗತ್ತಿಸಲಾದ ಮೂರು ದಾಖಲೆಪತ್ರಗಳು, ಮೂಲ ದಾಖಲೆಗಳ ಫೋಟೋಕಾಪಿಗಳಾಗಿವೆಯೆಂದು ವೇಣುಗೋಪಾಲ್ ತಿಳಿಸಿದರು.
ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಶುಪ್ರೀಂಕೋರ್ಟ್‌ಗೆ ಬುಧವಾರ ನೀಡಿದ ಹೇಳಿಕೆಯಲ್ಲಿ ರಫೇಲ್ ಒಪ್ಪಂದದ ದಾಖಲೆಪತ್ರಗಳನ್ನು ರಕ್ಷಣಾ ಸಚಿವಾಲಯದಿಂದ ಅಪಹರಿಸಲಾಗಿದೆಯೆಂದು ಆರೋಪಿಸಿದ್ದರು ಹಾಗೂ ಈ ದಾಖಲೆಗಳನ್ನು ಆಧರಿಸಿ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ, ‘ ದಿ ಹಿಂದೂ’ ಆಂಗ್ಲ ದಿನಪತ್ರಿಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಅಟಾರ್ನಿ ಜನರಲ್ ತಿಳಿಸಿದ್ದರು.
ಅತ್ಯಂತ ಗೌಪ್ಯವಾದ ರಫೇಲ್ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದವರಿಗೆ ಅಧಿಕೃತ ಗೌಪ್ಯತಾ ಕಾಯ್ದೆ ದೋಷಿಗಳಾಗುತ್ತಾರೆ ಹಾಗೂ ನ್ಯಾಯಾಂಗ ನಿಂದನೆಯನ್ನು ಎಸಗಿದ್ದಾರೆಂದು ವೇಣುಗೋಪಾಲ್ ಹೇಳಿದ್ದರು.