×
Ad

ಮಹಿಳೆಯರು ಸಾಧನೆಯ ಗುರಿ ಹೊಂದಬೇಕು: ಸಿ.ಎಂ.ಜೋಶಿ

Update: 2019-03-08 21:19 IST

ಉಡುಪಿ, ಮಾ.8: ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನತೆ ಹೊಂದಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಗುರಿಯನ್ನು ಹಾಕಿಕೊಂಡು ಅವುಗಳನ್ನು ಸಾಧಿಸಲು ಮುಂದಾಗಬೇಕಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿ.ಎಂ ಜೋಶಿ ಹೇಳಿದ್ದಾರೆ.

ಶುಕ್ರವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಉಡುಪಿ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಕುಂಜಿಬೆಟ್ಟು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಬಾಗಿದಾರಿಕೆ ಹೆಚ್ಚಾಗಿದ್ದು, ಕಾನೂನು ಕ್ಷೇತ್ರದಲ್ಲಿ ಕೂಡಾ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ರಾಜ್ಯದಲ್ಲಿ ಶೇ.25ಕ್ಕೂ ಅಧಿಕ ಮಹಿಳಾ ನ್ಯಾಯಾಧೀಶರಿರುವುದು ಸಂತಸ ತಂದಿದೆ ಎಂದ ಜಿಲ್ಲಾ ನ್ಯಾಯಾಧೀಶರು, ಸಮಾಜದಲ್ಲಿ ಮಹಿಳೆಯರ ರಕ್ಷಣೆಯ ಅಗತ್ಯವನ್ನು ಮನಗಂಡು ಅನೇಕ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ.ಆದರೆ ಈ ಕಾನೂನುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ವಿವೇಕಾನಂದ ಎಸ್.ಪಂಡಿತ್ ಮಾತನಾಡಿ, ಸಮಾಜಕ್ಕಾಗಿ ಮಹಿಳೆಯರು ಸಲ್ಲಿಸುತ್ತಿರುವ ಕೊಡುಗೆಗಳನ್ನು ನೆನೆದು ಗೌರವಿಸಬೇಕು. ಭಾರತದಲ್ಲಿ ಮಹಿಳೆಯರ ಸ್ಥಾನ ಉನ್ನತ ಮಟ್ಟದಲ್ಲಿದೆ. ಇಂದು ದೇಶ ಕಾಯುವ ಸೇನೆಯಲ್ಲಿಯೂ ಮಹಿಳೆಯರಿದ್ದು, ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತಿದ್ದಾರೆ. ಸಮಾಜದಲ್ಲಿ ಗಂಡು ಹೆಣ್ಣು ಸಮಾನರು. ಈ ವಿಚಾರದಲ್ಲಿ ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.
ಜಿಲ್ಲಾ ಕಾನೂನು ಅಧಿಕಾರಿ (ಕಿರಿಯ) ಮುಮ್ತಾಜ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಮಾತನಾಡಿದರು. ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಕಾಶ್ ಎಸ್. ಕಣಿವೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಂ ಜೋಶಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಉಪನ್ಯಾಸಕಿ ಡಾ.ನಿರ್ಮಲಾ ಕುಮಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಕಾನೂನು ವಿದ್ಯಾರ್ಥಿ ದೀಪಕ್ ಸ್ವಾಗತಿಸಿ, ಅಲ್ಡ್ರಿನ್ ಪೌಲ್ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ಕೆ.ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News